ಹುಬ್ಬಳ್ಳಿ : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿರುವ ಸದ್ಗುರು ಸಿದ್ಧಾರೂಢರ ಮಠಕ್ಕೆ ಭೇಟಿ ನೀಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಈಗಾಗಲೇ ರಾಜಕೀಯ ಚಟುವಟಿಕೆಗಳಿಗೆ ಹೊಸ ಆಯಾಮವನ್ನು ಕಲ್ಪಿಸುವ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಿರುವ ಗಾಲಿ ಜನಾರ್ದನ ರೆಡ್ಡಿ ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢರ ಹಾಗೂ ಗುರುನಾಥರೂಢರ ದರ್ಶನ ಪಡೆಯುವ ಮೂಲಕ ತಮ್ಮ ಸ್ಪರ್ಧೆ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ.
ಸೋಮವಾರ ದಿನವೇ ಸಿದ್ಧಾರೂಢರ ಮಠಕ್ಕೆ ತಮ್ಮ ಬೆಂಬಲಿಗರ ಹಾಗೂ ಅಭಿಮಾನಿಗಳ ಜೊತೆಗೆ ಆಗಮಿಸಿದ್ದು, ಕ್ಷಣಕಾಲ ಮಠದಲ್ಲಿ ನೂಕು ನುಗ್ಗಲು ನಡೆದಿರುವುದು ಕೂಡ ಸಾಮಾನ್ಯವಾಗಿತ್ತು.
ಮಠಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಆರಾಧ್ಯದೈವ ಸದ್ಗುರು ಸಿದ್ಧಾರೂಢರ ದರ್ಶನ ಪಡೆದಿರುವುದು ನನಗೆ ನಿಜಕ್ಕೂ ಸಂತೋಷ ತಂದಿದೆ. ಅಲ್ಲದೇ ಇಲ್ಲಿಗೆ ಬಂದು ಮಂಗಳಾರತಿ ಮಾಡಿ ಸದ್ಗುರು ಸಿದ್ಧಾರೂಢರಲ್ಲಿ ಬೇಡಿಕೊಂಡಿದ್ದೇನೆ. ನನ್ನ ರಾಜಕೀಯ ಜೀವನದ ಬಗ್ಗೆ ಈಗಾಗಲೇ ಕೆಲವೊಂದು ನಿರ್ಧಾರಗಳನ್ನು ಮಾಡಿದ್ದೇನೆ. ಮುಂದಿನ ರಾಜಕೀಯ ಪ್ರಯಾಣದ ಬಗ್ಗೆ ಡಿ. 25ರಂದು ಮಾಧ್ಯಮದ ಮೂಲಕವೇ ವಿವರಣೆ ನೀಡುತ್ತೇನೆ. ಅಲ್ಲಿಯವರೆಗೆ ಯಾವುದೇ ರೀತಿಯಲ್ಲಿ ಚರ್ಚೆ ಮಾಡುವುದು ಬೇಡ ಎಂದು ಹೇಳಿದರು.
ನನಗೆ ಪ್ರತಿ ಬಾರಿ ಬೆಂಗಳೂರಿಗೆ ಹೋಗಿ ಕುಳಿತುಕೊಳ್ಳಲು ಆಗುವುದಿಲ್ಲ. ಬಳ್ಳಾರಿ ಜಿಲ್ಲೆಗೆ ಪ್ರವೇಶ ನಿರ್ಬಂಧ ಇರುವ ನಿಟ್ಟಿನಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದರು. ಬಿಜೆಪಿ ನಾಯಕರ ಭೇಟಿಯ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಿಮ್ಮೆಲ್ಲಾ ಪ್ರಶ್ನೆಗೆ 25ರಂದು ಉತ್ತರ ನೀಡುತ್ತೇನೆ. ಆಗಲೇ ರಾಜಕೀಯ ವಿದ್ಯಮಾನಗಳ ಬಗ್ಗೆ ಹಾಗೂ ನನ್ನ ರಾಜಕೀಯ ನಿರ್ಧಾರದ ಬಗ್ಗೆ ಗೊತ್ತಾಗಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ :ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಗಾಲಿ ಜನಾರ್ದನ ರೆಡ್ಡಿ