ಹುಬ್ಬಳ್ಳಿ: ಮೀಸಲಾತಿಗಾಗಿ ಪಾದಯಾತ್ರೆ, ಸಮಾವೇಶ ನಡೆಸುವವರನ್ನ ವೈಭವಿಕರಿಸಲಾಗುತ್ತಿದೆ. ಮೀಸಲಾತಿ ಹೋರಾಟದ ಹಿಂದಿನ ಉದ್ದೇಶವೇ ಬೇರೆ ಇದೆ. ಆರ್ಥಿಕವಾಗಿ ದುರ್ಬಲರಿಗೆ ನ್ಯಾಯ ಕೊಡಿಸುವ ಉದ್ದೇಶ ಹೋರಾಟದಲ್ಲಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಎಂಎಲ್ಸಿ ಕೆ.ಸಿ ಪುಟ್ಟಸಿದ್ದ ಶೆಟ್ಟಿ ಆರೋಪಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ನಾಯಕತ್ವಕ್ಕೆ ಕೊಡಲಿ ಪೆಟ್ಟು ಕೊಡುವ ಉದ್ದೇಶಕ್ಕೆ ಮೀಸಲಾತಿ ಹೋರಾಟ ನಡೆದಿದೆ. ಯಡಿಯೂರಪ್ಪಗೆ ಪರ್ಯಾಯ ನಾಯಕತ್ವವನ್ನು ಬಿಜೆಪಿಯಲ್ಲಿ ಸೃಷ್ಟಿಸುವ ಉದ್ದೇಶದಿಂದ ಈ ಹೋರಾಟ ನಡೆದಿದೆ ಎಂದರು.
ಮೀಸಲಾತಿ ಹೆಸರಲ್ಲಿ ಜನ ಸೇರಿಸಿ ಸಮಾವೇಶ ನಡೆಸಲಾಗುತ್ತಿದೆ. ಸಿಎಂ ಬಿಎಸ್ವೈ ಸಹ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸುವುದಾಗಿ ಹೇಳುತ್ತಿದ್ದಾರೆ. ಸಚಿವ ಸಂಪುಟದ ಸಭೆಯಲ್ಲಿ ನಿರ್ಧರಿಸಿ ಮೀಸಲಾತಿ ನೀಡಲು ಸಾಧ್ಯವಾ? ಎಂದು ಪ್ರಶ್ನಿಸಿದರು.
50 ಪ್ರತಿಶತಕ್ಕಿಂತ ಮೀಸಲಾತಿ ಹೆಚ್ವಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದನ್ನು ಕೇಂದ್ರ ಸರ್ಕಾರ ಮಾತ್ರ ಮಾಡಲು ಸಾಧ್ಯ. 150 ಕೋಟಿ ವೆಚ್ಚ ಮಾಡಿ ಜಾತಿ ಸಮೀಕ್ಷೆ ಮಾಡಲಾಗಿದೆ. ಡಾ.ಕಾಂತರಾಜ್ ವರದಿ ಆಧರಿಸಿ ಮೀಸಲಾತಿ ನೀಡಿ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿ ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.