ಧಾರವಾಡ : ಕೋವಿಡ್ ಕಷ್ಟದಲ್ಲಿ ಬಿಜೆಪಿಯವರು ಖುರ್ಚಿಗಾಗಿ ಜಗಳಾಡುತ್ತಿದ್ದಾರೆ. ಮುಂದಿನ ಎರಡು ವರ್ಷ ನಾನೇ ಸಿಎಂ ಅಂತ ಯಡಿಯೂರಪ್ಪ ಹೇಳಿದ್ದಾರೆ. ಅದನ್ನು ಹೇಳುವ ಅವಶ್ಯಕತೆ ಏನಿದೆ? ಹೀಗೆ ಹೇಳ್ತಾರೆ ಅಂದ್ರೆ ಭಿನ್ನಾಭಿಪ್ರಾಯ ಇದೆ ಅಂತ ಅರ್ಥ. ಸರ್ಕಾರದಲ್ಲಿ ಸ್ಥಿರತೆಯಿಲ್ಲ, ಒಗ್ಗಟ್ಟು ಇಲ್ಲ, ಒಟ್ಟಿಗೆ ಕೆಲಸ ಮಾಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಆರ್ ವಿ ದೇಶಪಾಂಡೆ ಕಿಡಿಕಾರಿದರು.
ಒಬ್ಬೊಬ್ಬ ಮಂತ್ರಿ ಒಂದೊಂದು ಹೇಳಿಕೆ ಕೊಡುತ್ತಾರೆ. ರೈತರಿಗೆ ಈಗ ಸರ್ಕಾರದಿಂದ ಹಣ ಕೊಡುತ್ತಿದ್ದಾರೆ. ಅದರ ಮೂರು ಪಟ್ಟು ಬೇರೆ ಕಡೆಯಿಂದ ವಾಪಸ್ ತಗೋತಿದ್ದಾರೆ. ಕೇವಲ ಘೋಷಣೆ ಮಾಡುವ ಸರ್ಕಾರವಾಗಿದೆ. ಯಾರು ಸಿಎಂ ಆಗಿರಬೇಕು ಅಂತ ಅನ್ನೋದು ಅವರ ಆಂತರಿಕ ವಿಚಾರ. ಆದ್ರೆ, ಕೊರೊನಾ ಸಂದರ್ಭದಲ್ಲಿ ಹೀಗೆ ಚರ್ಚೆ ಮಾಡುವುದು ಸರಿಯಲ್ಲ ಎಂದ್ರು.
ಹೆಲ್ತ್ ವರ್ಕರ್ಗಳಿಗೆ ಶೇ.56ರಷ್ಟು ಮಾತ್ರ ವ್ಯಾಕ್ಸಿನ್ ಸಿಕ್ಕಿದೆ. ಇನ್ನುಳಿದವರಿಗೆ ವ್ಯಾಕ್ಸಿನ್ ಸಿಕ್ಕಿಲ್ಲ, ರಾಜ್ಯದಲ್ಲಿ ಸರಿಯಾದ ಕೊರೊನಾ ನಿರ್ವಹಣೆಯಿಲ್ಲ, ಔಷಧಿ ಮೇಲೆ ಶೇ.12ರಷ್ಟು ಜಿಎಸ್ಟಿಯಿದೆ ಎಂದು ಕಿಡಿಕಾರಿದರು. ಜನರು ಕಷ್ಟದಲ್ಲಿ ಇರುವಾಗ ಹಣ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಕ್ಕಿ ಕೊಟ್ಟರೆ ಮುಗೀತಾ.. ಕಾರ್ಮಿಕ ವಲಯದಲ್ಲಿ ಸಾವಿರಾರು ಕೋಟಿ ಫಂಡ್ ಇದೆ. ಆ ಹಣ ಸರ್ಕಾರ ಕೊಡುತ್ತಿದೆ. ನಾವು ಇದ್ದಾಗ ಆ ಫಂಡ್ಗೆ ಕೈ ಹಾಕಿರಲಿಲ್ಲ, ಆ ಹಣ ಕಾರ್ಮಿಕರನ್ನ ತಲುಪುತ್ತಿಲ್ಲ ಎಂದು ದೂರಿದರು.