ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯಲ್ಲಿ ಮೇಯರ್ ಮತ್ತು ಉಪಮೇಯರ್ ಬಿಜೆಪಿಯವರೇ ಆಗುವುದು ಸ್ಪಷ್ಟ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಎರಡು ಬಾರಿ ಆಡಳಿತ ನಡೆಸಿದೆ. ಈ ಬಾರಿಯೂ ಜನರು ಆಶೀರ್ವಾದ ಮಾಡಿದ ಪರಿಣಾಮವಾಗಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಜನಪ್ರತಿನಿಧಿಗಳು ವಿಶೇಷ ಮತ ಹಾಕುವ ಮೂಲಕ 45 ಸ್ಥಾನವನ್ನು ನಾವು ಪಡೆಯಲಿದ್ದೇವೆ. ಅಲ್ಲದೇ ಪಕ್ಷೇತರರು ನಮ್ಮ ಸಂಪರ್ಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಮೇಯರ್, ಉಪ ಮೇಯರ್ ಆಗೋದು ಖಚಿತ ಎಂದರು.
ಈಗಾಗಲೇ ಬೆಳಗಾವಿಯಲ್ಲಿ ನಮ್ಮವರೇ ಮೇಯರ್, ಉಪಮೇಯರ್ ಆಗಲಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ನಮ್ಮ ಅಭ್ಯರ್ಥಿಗಳೇ ಅತಿ ಹೆಚ್ಚು ಆರಿಸಿ ಬಂದಿದ್ದಾರೆ. ಅಲ್ಲಿಯೂ ಜೆಡಿಎಸ್ ಬೆಂಬಲಕ್ಕಾಗಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲಿಯೂ ನಾವೇ ಮೇಯರ್ ಉಪಮೇಯರ್ ಆಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಡಿಕೆಶಿ ಮತ್ತೊಬ್ಬರ ತಟ್ಟೆಯಲ್ಲಿ ನೊಣ ಹುಡುಕುತ್ತಿದ್ದಾರೆ':
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಖಾಸುಮ್ಮನೆ ಆರೋಪ ಮಾಡುವುದನ್ನು ಬಿಡಬೇಕು. ತಮ್ಮ ಊಟದ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಅದನ್ನು ನೋಡುವ ಬದಲು ನಮ್ಮ ತಟ್ಟೆಯಲ್ಲಿ ಬಿದ್ದ ನೊಣದ ಬಗ್ಗೆ ಮಾತನಾಡುತ್ತಿದ್ದಾರೆಂದು ಎಂದು ಡಿಕೆಶಿಗೆ ಟಾಂಗ್ ನೀಡಿದರು.
ಚುನಾವಣೆಯಲ್ಲಿ ಅಧಿಕಾರವನ್ನು ಯಾವ ರೀತಿ ದುರುಪಯೋಗ ಪಡಿಸಿಕೊಂಡಿದ್ದೇವೆ ಎಂದು ತೋರಿಸಲಿ. ಚುನಾವಣೆ ನಡೆಸುವುದು ಚುನಾವಣೆ ಆಯೋಗದ ಕೆಲಸ. ಅದು ಸ್ವತಂತ್ರ ಸಂಸ್ಥೆ, ವಾಸ್ತವ ಅರ್ಥಮಾಡಿಕೊಳ್ಳಬೇಕು. ಈ ರೀತಿಯಾಗಿ ರಾಜಕೀಯವಾಗಿ ಮಾತನಾಡುವುದನ್ನು ಬಿಡಬೇಕು ಎಂದರು.
ಇದನ್ನೂ ಓದಿ: ರಾಜಕೀಯ ಕಾರ್ಯದರ್ಶಿ, ವಿಧಾನಸಭೆ ಮುಖ್ಯ ಸಚೇತಕ ಸ್ಥಾನ ಕೊಟ್ರೆ ಒಪ್ಪೋದಿಲ್ಲ: ಅಭಯ್ ಪಾಟೀಲ್