ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಗೆ ಚುನಾವಣೆ ಘೋಷಣೆಯಾಗಿರುವುದರಿಂದ ಆಗಸ್ಟ್ 16 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಯಾವುದೇ ಅಧಿಕಾರಿ, ನೌಕರರು ಚುನಾಯಿತ ಪ್ರತಿನಿಧಿಗಳು, ರಾಜಕೀಯ ವ್ಯಕ್ತಿಗಳನ್ನು ಭೇಟಿಯಾಗುವುದು, ಚರ್ಚೆ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಮಾದರಿ ನೀತಿ ಸಂಹಿತೆ ಜಾರಿ ಕುರಿತು ಮಾತನಾಡಿದ ಅವರು, ಮಾದರಿ ನೀತಿ ಸಂಹಿತೆಯು ಆಗಸ್ಟ್ 6 ರಿಂದ ಸೆಪ್ಟಂಬರ್ 9 ರವರೆಗೆ ಜಾರಿಯಲ್ಲಿರುತ್ತದೆ. ಎಲ್ಲ ರಾಜಕೀಯ ಪಕ್ಷಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸಲು ಅವಕಾಶವಿಲ್ಲ. ಯಾವುದೇ ನೇಮಕಾತಿ ಪ್ರಕ್ರಿಯೆ ನಡೆಸಬಹುದು. ಆದರೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಬಾರದು ಎಂದು ಸೂಚನೆ ನೀಡಿದ್ರು.
ಮುಂಬಡ್ತಿಗಳನ್ನು ನೀಡಲು ಬಾಧಕವಿಲ್ಲ. ಚುನಾವಣೆಗಳಲ್ಲಿ ಸರ್ಕಾರಿ ನೌಕರರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ರಾಜಕೀಯ ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಕಡ್ಡಾಯ ವಿಡಿಯೋ ಚಿತ್ರೀಕರಣ, ಫೋಟೋ ದಾಖಲೆ ಕಾರ್ಯ ಸಮರ್ಪಕವಾಗಿ ನಡೆಯಬೇಕು ಎಂದರು.
ಇದನ್ನೂ ಓದಿ: ಕೋವಿಡ್ ಪ್ರಕರಣ ಶೇ 2ಕ್ಕಿಂತ ಹೆಚ್ಚಾದ ಜಿಲ್ಲೆಗಳಲ್ಲಿ ಕಠಿಣ ನಿಯಮ ಜಾರಿಗೆ ಸಿಎಂ ಸೂಚನೆ
ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಮಾತನಾಡಿ, ಪ್ರಸಕ್ತ ಚುನಾವಣೆಯಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಎಚ್ಚರವಹಿಸಬೇಕು ಎಂದರು. ಡಿಯುಡಿಸಿಯ ಯೋಜನಾ ನಿರ್ದೇಶಕ ರುದ್ರೇಶ್ ಮಾದರಿ ನೀತಿ ಸಂಹಿತೆ ಕುರಿತು ಮಾಹಿತಿ ನೀಡಿದರು.