ಹುಬ್ಬಳ್ಳಿ: ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ಆರೋಪದ ಮೇಲೆ ಹುಬ್ಬಳ್ಳಿಯ ನಗರದಲ್ಲಿ ನಿನ್ನೆ (ಶುಕ್ರವಾರ) ಇ.ಡಿ. ದಾಳಿ ನಡೆಸಿರುವ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ನಗರದ ಕೇಶ್ವಾಪುರದ ಮನೆಯೊಂದರ ಮೇಲೆ ಬೆಳಗ್ಗೆ7ರಿಂದ ಸಂಜೆ 8 ಗಂಟೆವರೆಗೆ ಶೋಧ ಕಾರ್ಯ ನಡೆಸಿದ್ದು, ಮೊಬೈಲ್ ಹಾಗೂ ಕೆಲ ಕಡತಗಳನ್ನು ವಶಕ್ಕೆ ಪಡೆದು ಇ.ಡಿ ಅಧಿಕಾರಿಗಳು ಮರಳಿದ್ದಾರೆ.
ಇನ್ನು ಇದೇ ವೇಳೆ, ಮಹಾರಾಷ್ಟ್ರದ ಮುಂಬೈ ಹಾಗೂ ಮಧ್ಯಪ್ರದೇಶದ ಇಂದೋರ್ ಪ್ರದೇಶಗಳಲ್ಲಿ ದಾಳಿ ಮಾಡಲಾಗಿದ್ದು, 46.50 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದು ಇ ಡಿ ಅಧಿಕಾರಿಗಳು ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಯಾವುದೇ ಹಣ ಪತ್ತೆಯಾಗಿಲ್ಲ ಎಂಬ ಮಾಹಿತಿ ಸಿಕ್ಕಿದ್ದು, ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್- ಇಬ್ಬರ ಬಂಧನ: ಮತ್ತೊಂದೆಡೆ, ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳ್ಯಾರು ಪರಿಸರ ಹಾಗೂ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಫಳ್ನೀರು ಪ್ರದೇಶದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಚೇಳ್ಯಾರುನ ದೀಪಕ್ (33), ಕಾವೂರಿನ ಸಂದೀಪ್ ಶೆಟ್ಟಿ (38) ಬಂಧಿತ ಆರೋಪಿಗಳು.
ಇಬ್ಬರು ಆರೋಪಿಗಳು ಮೊಬೈಲ್ ಫೋನ್ನಲ್ಲಿ ಬೆಟ್ಟಿಂಗ್ ಆ್ಯಪ್ ಉಪಯೋಗಿಸಿಕೊಂಡು ಬೆಟ್ಟಿಂಗ್ನಲ್ಲಿ ತೊಡಗಿದ್ದರು. ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಸೋಲು, ಗೆಲುವಿನಲ್ಲಿ ಜೂಜಾಟ ಆಡುತ್ತಾ ಸಾರ್ವಜನಿಕರಿಂದ ಹಣ ಸಂಗ್ರಹಿಸಿಕೊಂಡು ಅಕ್ರಮ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ಈ ಕುರಿತು ಖಚಿತ ಮಾಹಿತಿ ಆಧರಿಸಿದ ಮಂಗಳೂರು ಸಿಸಿಬಿ ಪೊಲೀಸರು ಎರಡು ಕಡೆ ದಾಳಿ ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ಇದನ್ನೂ ಓದಿ: ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ.. ಯಾದಗಿರಿಯಲ್ಲಿಯೂ ಮೂವರು ಪೊಲೀಸ್ ವಶಕ್ಕೆ