ಹುಬ್ಬಳ್ಳಿ: ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ನಾಳೆ ನಗರದ ನೆಹರೂ ಮೈದಾನದಲ್ಲಿ ನಡೆಯಲಿದೆ ಎಂದು ನಿರ್ಮಾಪಕ ಎ ಆರ್ ವಿಖ್ಯಾತ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ದೇವರಾಜ್ ಅಭಿನಯದ 30ನೇ ಚಿತ್ರ ಇದಾಗಿದೆ. ಸಿನಿಮಾ ಉತ್ತಮವಾಗಿ ಮೂಡಿ ಬಂದಿದ್ದು, ಪ್ರೇಮಿಗಳ ದಿನಾಚರಣೆ ಹಿನ್ನೆಲೆ ವಿಶೇಷವಾಗಿ ಆಡಿಯೋ ಬಿಡುಗಡೆ ಮಾಡಲಾಗುತ್ತಿದೆ. ಚಿತ್ರಕ್ಕೆ ನರಸಿಂಹ ಆ್ಯಕ್ಷನ್ ಕಟ್ ಹೇಳಿದ್ದು, ಭಾವನಾ ನಾಯಕಿಯಾಗಿ ನಟಿಸಿದ್ದಾರೆ. ಕಾರ್ಯಕ್ರಮಕ್ಕೆ ದೇವರಾಜ್ ಕುಟುಂಬ ಸದಸ್ಯರು, ಆಶಿಕಾ ರಂಗನಾಥ್, ದೀಪಿಕಾದಾಸ್, ನಟ ಡಾಲಿ ದನಂಜಯ್, ಅನೂಪ್ ಸೀಳಿನ್ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ನಟ ದರ್ಶನ್ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸಿನಿಮಾ ಫೆಬ್ರವರಿ ಕೊನೆ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.