ಹುಬ್ಬಳ್ಳಿ: ನಿತ್ಯ ತೊಂದರೆ ಅನುಭವಿಸುತ್ತಿರುವ ಇಲ್ಲಿನ 57ನೇ ವಾರ್ಡ್ನ ವೀರಾಪೂರ ಓಣಿಯ ನಿವಾಸಿಗಳು, ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ಕೊರೊನಾ ಆರ್ಭಟಿಸುತ್ತಿದೆ. ಮತ್ತೊಂದೆಡೆ ಮಳೆಗಾಲ ಬೇರೆ. ಇಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ ಕಟ್ಟಿಕೊಂಡಿರುವ ಚರಂಡಿಗಳನ್ನು ಸ್ವಚ್ಛಗೊಳಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ, ಚರಂಡಿ ನೀರು ಜನ ಓಡಾಡುವ ರಸ್ತೆಯಲ್ಲಿ ಹರಿಯುತ್ತಿದೆ. ಜನರು ಓಡಾವುದಕ್ಕೂ ಕಷ್ಟವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಮೊದಲೇ ಅವುಗಳನ್ನು ಸರಿಪಡಿಸಿ ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ ಬೀದಿ ದೀಪಗಳ ಸಮಸ್ಯೆಯೂ ಇದೆ. ಈ ಕುರಿತು ಸಾಕಷ್ಟು ಬಾರಿ ಇಲ್ಲಿನ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಬೀದಿ ದೀಪಗಳ ಸಮಸ್ಯೆಯಿಂದ ರಾತ್ರಿ ವೇಳೆ ಓಡಾಡಲು ಆಗುತ್ತಿಲ್ಲ. ಅಲ್ಲದೆ, ಕತ್ತಲಲ್ಲಿ ಹಾವು, ಚೇಳುಗಳು ಬಂದರೂ ಗೊತ್ತಾಗುವುದಿಲ್ಲ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.