ಹುಬ್ಬಳ್ಳಿ: ನಗರದ ಮೂರುಸಾವಿರ ಮಠದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿರುವ ಒಣಮೆಣಸಿನಕಾಯಿ ಮೇಳವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಸಚಿವ ಜಗದೀಶ ಶೆಟ್ಟರ್ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಸಂಶಿಯ ಅಮರಶಿವ ರೈತ ಉತ್ಪಾದಕ ಸಂಸ್ಥೆ ಮತ್ತು ಅಮರಗೋಳದ ಉಳವಾಯೋಗಿ ರೈತ ಉತ್ಪಾದಕ ಸಂಸ್ಥೆಗಳ ಸಹಯೋಗದಲ್ಲಿ ಮೂರು ದಿನಗಳ ಕಾಲ ಈ ಒಣ ಮೆಣಸಿನಕಾಯಿ ಮೇಳ ನಡೆಯಲಿದೆ.
ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಧ್ಯವರ್ತಿಗಳ ಹಾವಳಿ ಹಿಂದಿಕ್ಕುವ ಹಿನ್ನೆಲೆಯಲ್ಲಿ ಒಣ ಮೆಣಸಿನಕಾಯಿ ಮೇಳವನ್ನು ಆಯೋಜಿಸಲಾಗಿದೆ. ಇದು ರೈತರಿಂದ ನೇರವಾಗಿ ಸಾರ್ವಜನಿಕರಿಗೆ ಮೆಣಸಿನಕಾಯಿ ಹಾಗೂ ಸಾಂಬಾರ ಪದಾರ್ಥಗಳನ್ನು ಮಾರಾಟಮಾಡುವ ವೇದಿಕೆಯಾಗಿದ್ದು,ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಒಣ ಮೆಣಸಿನಕಾಯಿ ಮೇಳಕ್ಕೆ ಶಾಸಕ ಪ್ರಸಾದ್ ಅಬ್ಬಯ್ಯ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕಿ ಕುಸುಮಾವತಿ ಶಿವಳ್ಳಿ, ಭೇಟಿ ನೀಡಿ ಬ್ಯಾಡಗಿ ಹಾಗೂ ಇನ್ನಿತರ ಮಾದರಿಯ ಮೆಣಸಿನಕಾಯಿ ವಿಕ್ಷಣೆ ಮಾಡಿದ್ರು. ಈ ಮೇಳದಲ್ಲಿ ಮೆಣಸಿನಕಾಯಿ ಮೇಳದ ವ್ಯವಸ್ಥಾಪಕ ನಿರ್ದೇಶಕರಾದ ಮಂಜುನಾಥ ನಾರಾಯಣಪುರ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಡಾ. ರಾಮಚಂದ್ರ ಮಡಿವಾಳರ, ಹುಬ್ಬಳ್ಳಿಯ ವಾಣಿಜ್ಯೋದ್ಯಮ ಮಂಡಳಿಯ ಕೃಷಿ ವಿಭಾಗದ ಅಧ್ಯಕ್ಷರಾದ ಬಿ.ಬಿ ಪಾಟೀಲ್ ಭಾಗಿಯಾಗಿದ್ದರು.