ಧಾರವಾಡ : ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಅಲ್ಪಸ್ವಲ್ಪ ಬೆಳೆ ಸಹ ಇಲ್ಲದೇ ಕಂಗಾಲಾಗಿದ್ದಾರೆ. ಇದೀಗ ಹಿಂಗಾರು ಬಿತ್ತನೆ ಶುರು ಮಾಡಿಕೊಂಡಿದ್ದಾರೆ. ನಾಳೆಯಿಂದ ಜಿಲ್ಲೆಯಲ್ಲಿ ಬರ ಅಧ್ಯಯನ ತಂಡ ಆಗಮಿಸಿ ಅಧ್ಯಯನ ನಡೆಸಲಿದೆ. ಮುಂಗಾರು ಬೆಳೆ ಹಾಳಾದ ಬಳಿಕ ಹಿಂಗಾರಿಗೆ ಬಿತ್ತನೆ ಶುರು ಮಾಡಿರುವ ರೈತರು ಅಧ್ಯಯನ ತಡವಾಯಿತು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದಲ್ಲಿ ಕೇಂದ್ರ ಅಧ್ಯಯನ ತಂಡ ತನ್ನ ಅಧ್ಯಯನ ಪ್ರವಾಸ ಆರಂಭಿಸಿದೆ. ನಾಳೆ ಧಾರವಾಡಕ್ಕೂ ಸಹ ಈ ತಂಡ ಬರುತ್ತಿದೆ. ಆದರೆ, ಈಗ ಅಧ್ಯಯನ ತಂಡ ಬರುತ್ತಿರುವ ಬಗ್ಗೆ ಧಾರವಾಡ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ತಂಡ ಬಂದರೆ ಈಗ ನೋಡೊಕೆ ಮುಂಗಾರಿನ ಹಾಳಾದ ಬೆಳೆಯೇ ಇಲ್ಲ. ಹಿಂಗಾರು ಬಿತ್ತನೆ ಚುರುಕುಗೊಂಡಿದ್ದು, ನೋಡಿ ಅವರು ಬರ ಇಲ್ಲ ಎಂದು ಬರೆದುಕೊಂಡು ಹೋದರೆ ಹೇಗೆ ಎನ್ನುವುದು ರೈತರ ಪ್ರಶ್ನೆಯಾಗಿದೆ.
ಜಿಲ್ಲೆಯಲ್ಲಿನ 7 ತಾಲೂಕುಗಳ ಪೈಕಿ 4 ತಾಲೂಕುಗಳನ್ನು ಈಗಾಗಲೇ ಬರ ಪೀಡಿತ ಎಂದು ಘೋಷಣೆ ಮಾಡಿದ್ದು, 2019ರಿಂದ 2022ರ ಜಿಲ್ಲೆಯಲ್ಲಿ ಪ್ರತಿ ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ. ಈ ವರ್ಷ ಅನಾವೃಷ್ಟಿ ಕಾಡಿದೆ. ಈ ಸಲ ಜಿಲ್ಲೆಯಲ್ಲಿ ಒಟ್ಟು 2 ಲಕ್ಷ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.
ಅದರಲ್ಲಿ 1 ಲಕ್ಷ 59 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಇನ್ನುಳಿದ ಬೆಳೆ ಸಹ ನಿರೀಕ್ಷಿತ ಪ್ರಮಾಣದಲ್ಲಿ ಕೈಗೆ ಸಿಕ್ಕಿಲ್ಲ. ಸೋಯಾಬಿನ್, ಭತ್ತ, ಗೋವಿನಜೋಳ, ಶೇಂಗಾ, ಉದ್ದು, ಹೆಸರು, ಹತ್ತಿ, ಕಬ್ಬು, ಮೆಣಸಿನಕಾಯಿ, ಈರುಳ್ಳಿ ಟೊಮೆಟೊ, ಆಲೂಗಡ್ಡೆ ಬೆಳೆ ಎಲ್ಲವೂ ಬರದಿಂದ ಒಣಗಿ ಹಾಳಾಗಿ ಹೋಗಿದೆ.
ಕಳೆದ ವಾರ ಸುರಿದ ಮಳೆಯಿಂದಾಗಿ ಅದನ್ನೆಲ್ಲ ಕಿತ್ತು ಹಾಕಿರುವ ರೈತರು ಈಗ ಹಿಂಗಾರು ಹಂಗಾಮಿಗೆ ಕಡಲೆ ಬಿತ್ತನೆ ಮಾಡುತ್ತಿದ್ದಾರೆ. ಹೀಗಾಗಿ ಈ ತಂಡ ಒಂದೂವರೆ ತಿಂಗಳ ಮೊದಲೇ ಬರಬೇಕಿತ್ತು. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ತಮ್ಮ ಮಧ್ಯದ ಕಿತ್ತಾಟದಿಂದಾಗಿ ರೈತರು ಬಡವಾಗುವಂತೆ ಮಾಡಿದ್ದು, ಈಗ ಬರುವ ಅಧ್ಯಯನ ತಂಡದ ಮೇಲೆ ನಮಗೆ ಭರವಸೆ ಇಲ್ಲದಂತಾಗಿದೆ ಎನ್ನುವುದು ರೈತರ ಆರೋಪವಾಗಿದೆ.
ಗುರುವಾರ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಬರ ಅಧ್ಯಯನ ತಂಡ ಸಿಎಂ ಸಿದ್ದರಾಮಯ್ಯ ಅವರ ಜತೆ ಸಭೆ ನಡೆಸಿತ್ತು.
ಹಸಿರು ಬರ ಘೋಷಣೆಗೆ ಕೇಂದ್ರ ಸರ್ಕಾರಕ್ಕೆ ಆಗ್ರಹ :- ಸಂತೋಷ ಲಾಡ್ : ನಾಳೆ ಬರ ಅಧ್ಯಯನ ತಂಡ ಧಾರವಾಡಕ್ಕೆ ಬರುತ್ತಿದೆ. ಹಸಿರು ಬರ ಮಾಡಬೇಕೆಂಬ ಆಗ್ರಹ ನಮ್ಮದು ಇದೆ. ಕಲಘಟಗಿ, ಅಣ್ಣಿಗೇರಿ, ಅಳ್ನಾವರ ಭಾಗದಲ್ಲಿಯೂ ಬರ ಇದೆ. ಆದರೆ ಮೇಲ್ನೋಟಕ್ಕೆ ಹಸಿರು ಕಾಣುತ್ತಿದೆ. ಹೀಗಾಗಿ ಹಸಿರು ಬರ ಘೋಷಣೆಗೆ ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. ಹಸಿರು ಕಂಡ ತಕ್ಷಣ ಬರಗಾಲ ಅಂತಾ ಘೋಷಣೆ ಮಾಡೊದಿಲ್ಲ. ಸೆಟ್ಲೈಟ್ನಲ್ಲಿ ನೋಡಿದಾಗ ಬೆಳೆ ಕಾಣುತ್ತದೆ. ಆದರೆ ಅದು ಪ್ರಗತಿ ಆಗಿರುವುದಿಲ್ಲ, ಎಲ್ಲ ಬೆಳೆ ಹಾಳಾಗಿ ಹೋಗಿದೆ. ಹೀಗಾಗಿ ಕೇಂದ್ರ ತಂಡಕ್ಕೆ ಈ ಸಂಬಂಧ ಆಗ್ರಹ ಮಾಡುತ್ತೇವೆ ಹಸಿರು ಬರಗಾಲಕ್ಕೆ ಆಗ್ರಹ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ: ದೇಶದಲ್ಲಿ ಸಾಮಾನ್ಯಕ್ಕಿಂತ ಶೇ 6ರಷ್ಟು ಮುಂಗಾರು ಮಳೆ ಕೊರತೆ