ಹುಬ್ಬಳ್ಳಿ: ರಾಷ್ಟ್ರೀಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಆದೇಶ ಪಾಲಿಸದ ಕಾರಣ ದೇಶಪಾಂಡೆ ನಗರದ ಕಲ್ಯಾಣಪುರಕರ್ ನರ್ಸಿಂಗ್ ಹೋಂನ ವೈದ್ಯೆ ಡಾ. ಸಬಿತಾ ವಿನೋದ್ ಕಲ್ಯಾಣಪುರಕರ್ ಅವರಿಗೆ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಯು ಆರು ತಿಂಗಳು ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ: ಜಿಲ್ಲೆಯ ಡಾಲರ್ಸ್ ಕಾಲೋನಿ ನಿವಾಸಿ ಶ್ರೀಲಕ್ಷ್ಮಿ ಕುಲಕರ್ಣಿ ಎಂಬುವರು 2008 ಜನವರಿ 4ರಂದು ಹೆರಿಗೆಗಾಗಿ ಕಲ್ಯಾಣಪುರಕರ್ ನರ್ಸಿಂಗ್ ಹೋಂಗೆ ದಾಖಲಾಗಿದ್ದಾಗ ಸಾವಿಗೀಡಾಗಿದ್ದರು. ‘ವೈದ್ಯಕೀಯ ನಿರ್ಲಕ್ಷ್ಯದಿಂದ ತಮ್ಮ ಪತ್ನಿ ಸಾವಿಗೀಡಾಗಿದ್ದಾರೆ’ ಎಂದು ಆರೋಪಿಸಿ ಪತಿ, ವಕೀಲ ಶ್ರೀಪಾದ ಕುಲಕರ್ಣಿ ಅವರು ವೈದ್ಯೆ ಸಬಿತಾ ವಿರುದ್ಧ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯ ಆಯೋಗ ಶ್ರೀಲಕ್ಷ್ಮಿ ಅವರ ಪತಿಗೆ ₹18 ಲಕ್ಷ ಪರಿಹಾರವನ್ನು ಶೇ. 9ರಷ್ಟು ಬಡ್ಡಿ ಸೇರಿಸಿ ನೀಡಬೇಕು ಎಂದು 2015 ಮೇ 23ರಂದು ತೀರ್ಪು ನೀಡಿತ್ತು. ಆದರೆ, ವೈದ್ಯರು ಕೇವಲ ₹18 ಲಕ್ಷ ಪರಿಹಾರ ಮಾತ್ರ ನೀಡಿ, ಬಡ್ಡಿ ನೀಡಲು ನಿರಾಕರಿಸಿದ್ದರು.
ಹೀಗಾಗಿ ಬಡ್ಡಿ ಪಾವತಿಸಿಲ್ಲ ಎಂದು ದೂರಿ ಪತಿ ಶ್ರೀಪಾದ ಅವರು ಪುನಃ ಧಾರವಾಡ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆ ಮೆಟ್ಟಿಲೇರಿದ್ದರು. ಈ ಸಂಬಂಧ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದ ವೇದಿಕೆ, ವಿಚಾರಣೆ ನಡೆಸಿ ನ. 7ರಂದು ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಿದೆ.