ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದ ಧಾರವಾಡ–ಉಣಕಲ್ ನಡುವಿನ 16.64 ಕಿ.ಮೀ ಅಂತರದ ಜೋಡಿ ರೈಲು ಮಾರ್ಗ(ಡಬ್ಲಿಂಗ್) ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ರೈಲುಗಳ ಸಂಚಾರವೂ ಆರಂಭವಾಗಿದೆ.
ರೈಲ್ವೆ ವಿಕಾಸ್ ನಿಗಮ ನಿಯಮಿತ (ಆರ್‌ವಿಎನ್‌ಎಲ್) ನಿರ್ವಹಿಸುತ್ತಿರುವ ಈ ಕಾಮಗಾರಿಯು ಹೊಸಪೇಟೆ–ತಿನೈಘಾಟ್–ವಾಸ್ಕೋಡಗಾಮ ನಡುವಿನ 374 ಕಿ.ಮೀ. ಜೋಡಿ ಮಾರ್ಗದ ಭಾಗವಾಗಿದೆ. ಇನ್ನುಳಿದ ಉಣಕಲ್–ಹುಬ್ಬಳ್ಳಿ ರೈಲ್ವೆ ನಿಲ್ದಾಣದ ನಡುವಿನ ನಾಲ್ಕು ಕಿ.ಮೀ. ಅಂತರದ ಜೋಡಿ ಮಾರ್ಗ ಕಾರ್ಯ ಈಗಾಗಲೇ ಆರಂಭವಾಗಿದ್ದು, 2021ರ ಜನವರಿ ವೇಳೆಗೆ ಪೂರ್ಣಗೊಳ್ಳಲಿದೆ.
ಧಾರವಾಡ, ನವಲೂರು ಮತ್ತು ಹುಬ್ಬಳ್ಳಿ ಪಶ್ಚಿಮ ಬೈಪಾಸ್ ಕ್ಯಾಬಿನ್‌ನಲ್ಲಿ ಸಿಗ್ನಲ್ ವ್ಯವಸ್ಥೆ ಕಲ್ಪಿಸಲಾಗಿದೆ. ನವಲೂರು ಯಾರ್ಡ್‌ನಲ್ಲಿ ಸರಕು ಸಾಗಣೆಗಳ ವಾಹನಗಳ ಸಾಗಾಟಕ್ಕೆ ಹೆಚ್ಚುವರಿಯಾಗಿ ಮೂರು ಲೈನ್‌ಗಳನ್ನು ನಿರ್ಮಿಸಲಾಗಿದೆ. ಮೊದಲು ಮೂರು ಲೈನ್‌ಗಳಷ್ಟೇ ಇದ್ದವು.
ಧಾರವಾಡ–ಉಣಕಲ್ ಜೋಡಿ ಮಾರ್ಗಕ್ಕೆ ಅಂದಾಜು 133.8 ಕೋಟಿ ವೆಚ್ಚವಾಗಿದ್ದು, ಉಣಕಲ್ ಮತ್ತು ನವಲೂರು ಬಳಿ ನಡೆದುಕೊಂಡು ಹೋಗಲು ಕಿರುಸೇತುವೆಗಳನ್ನು ನಿರ್ಮಿಸಲಾಗಿದೆ ಎಂದು ನೈರುತ್ಯ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.