ಧಾರವಾಡ: ಇನ್ಫೋಸಿಸ್ ವತಿಯಿಂದ ನೀಡಿರವ ಕಿಟ್ ವಿತರಿಸುವ ಬಗ್ಗೆ ಬಿಜೆಪಿ ಕಾರ್ಯಕರ್ತರ ಫೇಸ್‌ಬುಕ್ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯಿಸಿದ್ದಾರೆ. ಜಿಲ್ಲಾಡಳಿತಕ್ಕೆ ಅನೇಕರು ದೇಣಿಗೆ ನೀಡಿದ್ದಾರೆ. ಅವುಗಳನ್ನು ಜನರಿಗೆ ತಲುಪಿಸಲು ಪಕ್ಷದ ಕಾರ್ಯಕರ್ತರು ಕೈ ಜೋಡಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.
ಯಾವುದೋ ಪ್ರದೇಶಕ್ಕೆ ಹೋದಾಗ ನಿಜವಾದ ಬಡವರನ್ನು ಗುರುತಿಸಲು ಸ್ಥಳೀಯರು ಬೇಕು. ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ಮೂಲಕ ವಿತರಣೆ ಮಾಡಿಸುತ್ತಿದ್ದಾರೆ. ಜಿಲ್ಲಾಡಳಿತದ ಕಿಟ್ ಆ ಮೂಲಕ ಮುಟ್ಟಿಸುವ ಕಾರ್ಯ ಮಾಡಿದ್ದಾರೆ. ಒಂದು ಫೋಟೋ ಫೇಸ್ಬುಕ್ಗೆ ಹಾಕಿಕೊಂಡಿದ್ದಾರೆ. ಪಕ್ಷಾತೀತವಾಗಿ ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದರು.
ಎಲ್ಲಿಯೂ ನಾವೇ ಕೊಡುತ್ತಿದ್ದೇವೆ ಎಂದು ಹೇಳಿಕೊಂಡಿಲ್ಲ. ಅವರ ಕಾರ್ಯ ಮೆಚ್ಚಬೇಕು. ಜಿಲ್ಲಾಡಳಿತ ಹೇಳಿದಂತೆ ಅವರೆಲ್ಲ ಮಾಡುತ್ತಿದ್ದಾರೆ. ಆದರೆ ಫೇಸ್‌ಬುಕ್ ಪೋಸ್ಟ್‌ಗೆ ರಾಜಕೀಯ ಬಣ್ಣ ಕೊಡಲಾಗುತ್ತಿದೆ. ಕಾಂಗ್ರೆಸ್‌ನವರು ಸಹ ಹೀಗೆ ಕಿಟ್‌ಗಳನ್ನು ಕೊಟ್ಟಿದ್ದಾರೆ. ಅವರೂ ಪೋಸ್ಟ್ ಮಾಡಿದ್ದರೂ ನಾವೇನೂ ಹೇಳಿಲ್ಲ. ಹೀಗಾಗಿ ಕಾಂಗ್ರೆಸ್‌ನವರು ಇದನ್ನು ರಾಜಕೀಯ ಮಾಡಬಾರದು. ಎಲ್ಲರೂ ಸೇರಿ ಒಳ್ಳೆಯ ಕೆಲಸ ಮಾಡಬೇಕು. ದಾನಿಗಳಿಗೆ ಅಪಾರ್ಥ ಆಗುವಂತೆ ನಡೆಯಬಾರದು ಎಂದಿದ್ದಾರೆ.