ಧಾರವಾಡ: ಅಕ್ಟೋಬರ್ 28 ರಂದು ನಡೆಯಲಿರುವ, ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಕಾರ್ಯ ಜರುಗಿತು.
ಧಾರವಾಡ ತಹಶೀಲ್ದಾರ್ ಕಚೇರಿ ಆವರಣದ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರು ಮತಗಟ್ಟೆ ತೆರಳುವ ಅಧಿಕಾರಿ, ಸಿಬ್ಬಂದಿಗೆ ಹಸ್ತಾಂತರಿಸಲು ಸಿದ್ಧಪಡಿಸಿರುವ ಚುನಾವಣಾ ಸಾಮಗ್ರಿಗಳು, ಕೋವಿಡ್ ನಿಯಂತ್ರಣ ಮುಂಜಾಗ್ರತಾ ಕ್ರಮಕ್ಕಾಗಿ ನೀಡಲಾಗಿರುವ ಮಾಸ್ಕ್, ಹ್ಯಾಂಡ್ ಗ್ಲೋಸ್ ಮತ್ತಿತರ ಪರಿಕರಗಳನ್ನು ಪರಿಶೀಲಿಸಿದರು.
ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿರುವ ಪಶ್ಚಿಮ ಪದವೀಧರ ಕ್ಷೇತ್ರ, ಧಾರವಾಡ ಜಿಲ್ಲೆಯಲ್ಲಿ 21,549 , ಗದಗ- 15,978 , ಹಾವೇರಿ -23,593 ಹಾಗೂ ಉತ್ತರ ಕನ್ನಡ 13,148 ಜನ ಮತದಾರರು ಸೇರಿ ಒಟ್ಟು ಕ್ಷೇತ್ರದಲ್ಲಿ 74,268 ಮತದಾರರು ಇದ್ದಾರೆ.
ಧಾರವಾಡ ಜಿಲ್ಲೆಯ 54 ಮತಗಟ್ಟೆಗಳಲ್ಲಿ ಅಕ್ಟೋಬರ್ 28 ರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.