ಧಾರವಾಡ: ಕೊರೊನಾ ವಿರುದ್ಧದ ಸಮರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಶ್ರಮ ಗುರುತಿಸಿ ಅವರಿಗೆ ಪಾದಪೂಜೆ ಸಲ್ಲಿಸಿ ದಿನಸಿ ಕಿಟ್ ನೀಡಿ ಗೌರವಿಸುವ ಕಾರ್ಯವನ್ನು ಕೆಎಂಎಫ್ ತಾಂತ್ರಿಕ ಅಧಿಕಾರಿ ಎನ್.ಎಸ್.ಅರಿವಾಳದ ಮಾಡಿದ್ದಾರೆ.
ಧಾರವಾಡ ನಗರದ ಟೋಲ್ ನಾಕಾದಲ್ಲಿ ಪ್ರತಿ ದಿನ 30ಕ್ಕೂ ಹೆಚ್ಚು ಪೌರ ಕಾರ್ಮಿಕರು, ಬೆಳಗಿನ ಜಾವವೇ ಬಂದು ದುಡಿಯುತ್ತಿರುತ್ತಾರೆ. ಇದನ್ನು ಕಳೆದ ಒಂದು ತಿಂಗಳಿನಿಂದ ಗಮನಿಸಿದ ನಾಗಪ್ಪ ಅರಿವಾಳದ ಇಂದು ಈ ಪೌರಕಾರ್ಮಿಕರಿಗೆ ಪಾದಪೂಜೆ ಮಾಡಿ ಸನ್ಮಾನ ಮಾಡಿದ್ದಾರೆ.
ವಿಜಯಪುರದ ಇಂಚಗೇರಿ ಮಠದ ಭಕ್ತರು ಆಗಿರುವ ನಾಗಪ್ಪ ಇಂಚಗೇರಿ ಮಠದ ಪರಂಪರೆಯಂತೆ ಬಡವರ ಬೆವರಿಗೆ ಬೆಲೆ ಸಿಗಬೇಕು ಎಂಬ ಸದ್ಭಾವದೊಂದಿಗೆ ಈ ಪೌರಕಾರ್ಮಿಕರಿಗೆ ಪಾದಪೂಜೆ ಮಾಡಿದ್ದಷ್ಟೇ ಅಲ್ಲದೆ, ಅವರಿಗೆ ನಂದಿನಿ ತುಪ್ಪ ಹಾಗೂ ಪೇಡಾ ಜೊತೆಗೆ ದಿನಸಿ ಕಿಟ್ ನೀಡುವ ಮೂಲಕ ಅರ್ಥಪೂರ್ಣ ಸನ್ಮಾನ ಮಾಡಿದ್ದಾರೆ.
ಜಗತ್ತಿನಾದ್ಯಂತ ಕೊರೊನಾದಿಂದ ಸಮಸ್ಯೆ ಎದುರಿಸುತ್ತಿರುವ ದಿನಗಳಲ್ಲಿ ಪೌರಕಾರ್ಮಿಕರು ನಾಡಿಗಾಗಿ ದುಡಿಯುತಿದ್ದಾರೆ. ಅಂಥವರ ಸೇವೆ ಗುರುತಿಸಿ ಪಾದಪೂಜೆ ಮಾಡಿ ಗೌರವಿಸಿರುವುದು ಸಮಾಜಕ್ಕೆ ಮಾದರಿಯಾಗಿದೆ.