ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ವಿದ್ಯುತ್ ಫೀಡರ್ ಪಿಲ್ಲರ್ ತಗಲಿ ಹಸು-ಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಇಂದು ಬೆಳಗಿನ ಜಾವ ಅಕ್ಕಿಹೊಂಡದ ಬಳಿ ನಡೆದಿದೆ. ಸ್ಮಾರ್ಟ್ ಸಿಟಿ ಯೋಜನೆಗಳಿಂದಾಗಿ ಒಂದಲ್ಲಾ ಒಂದು ಯಡವಟ್ಟುಗಳು ಆಗುತ್ತಿವೆ ಎಂದು ಅಲ್ಲಿನ ಸಾರ್ವಜನಿಕರು ಆರೋಪಿಸಿದ್ದಾರೆ.
ಅದರಂತೆ ಅಕ್ಕಿಹೊಂಡದಲ್ಲಿ ಕೂಡಾ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸುತ್ತಿರುವವರ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳಿಂದ ಇಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯ ಭಾಗವಾಗಿ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಕೆ ಮಾಡಲಾಗಿತ್ತು. ವಿದ್ಯುತ್ ನಿರ್ವಹಣೆಗೆ ಅಳವಡಿಸಲಾಗಿದ್ದ ವಿದ್ಯುತ್ ಫೀಡರ್ ಪಿಲ್ಲರ್ ನಿರ್ವಹಣೆಗೆ ಅಳವಡಿಸಿದ್ದ ಸ್ಥಳದಲ್ಲಿ ವಿದ್ಯುತ್ ಫೀಡರ್ ಪಿಲ್ಲರ್ ಶಾರ್ಟ್ ಆಗಿ ವಿದ್ಯುತ್ ತಗುಲುತ್ತಿದೆ. ಮಳೆಯಿಂದ ನೆಲ ತೇವಾಂಶಗೊಂಡಿದ್ದರಿಂದ ಆ ಜಾಗದಲ್ಲಿ ಆಸರೆ ಪಡೆದಿದ್ದ ಹಸು ಮತ್ತು ಕರು ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸಾವಿಗೀಡಾಗಿವೆ.
ಸೂಕ್ತ ವ್ಯವಸ್ಥೆ ಕಲ್ಪಿಸಬೇಕು :ನಗರದಲ್ಲಿ ಅಕ್ಕಿಹೊಂಡ ಪ್ರಮುಖ ವ್ಯಾಪಾರಿ ಕೇಂದ್ರವಾಗಿದೆ. ಬೆಳಗಿನ ಸಮಯ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಜನ ಸಂಚಾರ ಕಡಿಮೆ ಇದ್ದ ಹಿನ್ನೆಲೆ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಇವತ್ತು ಹಸು-ಕರು ಮೃತಪಟ್ಟಿದೆ, ನಾಳೆ ಮನುಷ್ಯರಿಗೆ ಏನಾದರೂ ಸಮಸ್ಯೆ ಆದರೆ ಗತಿ ಏನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ನಗರದಲ್ಲಿರುವ ವಿದ್ಯುತ್ ಫೀಡರ್ ಪಿಲ್ಲರ್ಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕಿದೆ.
ಸ್ಮಾರ್ಟ್ ಸಿಟಿಯವರು ಅಂಡರ್ ಗ್ರೌಂಡ್ ಕೇಬಲ್ ಅಳವಡಿಸುತ್ತಿದ್ದಾರೆ. ಅವುಗಳನ್ನು ಸಮರ್ಪಕವಾಗಿ ಜೋಡಣೆ ಸೇರಿದಂತೆ ಸಮರ್ಪಕ ನಿಭಾಯಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ ಜನರಿಗೆ ಹಾನಿಯಾಗುವಂತಹ ಕೆಲಸ ಆಗುತ್ತಿದ್ದು, ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಸಾರ್ವಜನಿಕರು ಇದೇ ರಸ್ತೆ ಮಾರ್ಗವಾಗಿ ಸಂಚರಿಸುತ್ತಾರೆ. ಇಂತಹ ಘಟನೆ ಮರುಕಳಿಸಿದರೆ ಯಾರು ಹೊಣೆ ? ಎಂದು ಜನರು ಪ್ರಶ್ನಿಸಿದ್ದಾರೆ.
ಬೆಳಗ್ಗೆ 7 ಗಂಟೆಗೆ ಎರಡು ಆಕಳು ಕಣ್ಣೆದುರಿಗೆ ಸತ್ತು ಹೋದವು. ಎಷ್ಟು ಉಳಿಸಲಿಕ್ಕೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ರಾತ್ರಿ ಹೊತ್ತು ಜನರು ತಿರುಗಾಡುವಂತಹ ಸ್ಥಳ ಇದು.. ಇಂತಹ ಅವಘಡಗಳು ಸಂಭವಿಸಿದರೆ ಇದಕ್ಕೆಲ್ಲ ಯಾರ ಹೊಣೆ ಎಂದು ಸ್ಥಳೀಯ ನಿವಾಸಿ ನಿವಾಸ ಕುಮಾರ್ ಐಹೊಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂಓದಿ:ಕರಾವಳಿಯಲ್ಲಿ ಮುಂದುವರಿದ ಮಳೆಯಾರ್ಭಟ; ಸಂಪರ್ಕ ಕಳೆದುಕೊಂಡ ಜನರು