ಹುಬ್ಬಳ್ಳಿ: ಬಿಜೆಪಿಯು ಕಾಂಗ್ರೆಸ್ಅನ್ನು ಸರ್ವನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ಆದ್ರೆ ಅದು ಸಾಧ್ಯವಿಲ್ಲ. ಇದಕ್ಕೆ ಮಹಾರಾಷ್ಟ್ರ, ಹರಿಯಾಣ ಚುನಾವಣೆಗಳ ಫಲಿತಾಂಶಗಳೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಕಾಂಗ್ರೆಸ್ ನ್ನು ಸೋಲಿಸಬೇಕೆಂದು ಬಿಜೆಪಿ ಬ್ಲಾಕ್ಮೇಲ್ ರಾಜಕಾರಣ ಮಾಡಿತ್ತು. ಅಲ್ಲದೇ ಕಾಂಗ್ರೆಸ್ ಧೂಳಿಪಟ ಆಗುತ್ತೆ ಅಂತ ಆ ಪಕ್ಷದ ನಾಯಕರು ಹೇಳಿದ್ದರು. ಆದ್ರೆ ಹರಿಯಾಣದಲ್ಲಿ ಇನ್ನೂ ಯಾರು ಸರ್ಕಾರ ರಚನೆ ಮಾಡ್ತಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ಇನ್ನೂ ಎರಡೂ ರಾಜ್ಯಗಳಲ್ಲಿ ಮೋದಿ, ಶಾ ಹೆಚ್ಚು ರ್ಯಾಲಿ ಮಾಡಿದ್ದಾರೆ. ಆದರೆ ಅವರ ಬಗ್ಗೆ ಜನರಿಗೆ ನಿರಾಸೆಯಾಗಿದೆ ಎಂದು ಗೊತ್ತಾಗಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಗರು ಎಲ್ಲ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಚುನಾವಣೆ ಎದುರಿಸಿದ್ದಾರೆ. ಆದರೂ ಎರಡು ರಾಜ್ಯದ ಜನ ಸರಿಯಾಗಿ ತೀರ್ಪು ನೀಡಿಲ್ಲ. ಈ ದಿಸೆಯಲ್ಲಿ ಕಾಂಗ್ರೆಸ್ ನ್ನು ಇನ್ನಷ್ಟು ಗಟ್ಟಿಗೊಳಿಸುತ್ತೇವೆ. ಇದಕ್ಕಾಗಿ ಪಕ್ಷವನ್ನು ಸದೃಢಗೊಳಿಸುತ್ತೇವೆ ಎಂದರು.
ಕರ್ನಾಟಕದಲ್ಲೂ ಕೂಡಾ ಬಿಜೆಪಿ ಸರ್ಕಾರ ವಿಫಲವಾಗಿದೆ. ರಾಜ್ಯಕ್ಕೆ ಕೇಂದ್ರದಿಂದ ಒಂದು ಪೈಸೆಯೂ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ದೀಪಾವಳಿ ನಂತರ ಬೃಹತ್ ಪಾದಯಾತ್ರೆ ಹಮ್ಮಿಕೊಂಡು ರಾಜ್ಯ ಹಾಗೂ ಕೇಂದ್ರವನ್ನ ಬಡಿದೆಬ್ಬಿಸುವ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ರು.
ರಾಜ್ಯದಲ್ಲಿ ಉಪಚುನಾವಣೆ ಬೇಗ ಆಗಬೇಕೆಂಬುದೇ ನಮ್ಮ ಆಶಯವಾಗಿದ್ದು, ಸುಪ್ರೀಂಕೋಟ್೯ ಏನು ತೀರ್ಮಾನ ಮಾಡುತ್ತೆ ಎಂಬುದನ್ನು ಕಾದು ನೋಡಬೇಕು. ಇದೀಗ ಡಿಕೆಶಿ ಜೈಲಿಂದ ಹೊರಗೆ ಬಂದಿರೋದು ನಮಗೆ ಬಲ ಬಂದಂತಾಗಿದೆ. ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ವಿಚಾರ ಕುರಿತು ಪ್ರತಿಕ್ರಿಯಿಸಿ ದಿನೇಶ್ ಅವರು, ಅದು ಹೈಕಮಾಂಡ್ ಗೆ ಬಿಟ್ಟಿದ್ದು. ಕಾಂಗ್ರೆಸ್ನಲ್ಲಿ ನಾನು, ಡಿಕೆಶಿ, ಸಿದ್ದರಾಮಯ್ಯ, ಖರ್ಗೆ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.