ಹುಬ್ಬಳ್ಳಿ: ವಿದ್ಯಾರ್ಥಿಗಳ ಪ್ರವೇಶಾತಿ, ಶಿಕ್ಷಕರ ನೇಮಕಾತಿ, ಹೊರತುಪಡಿಸಿದರೆ ಗ್ರಾಮೀಣ ಪ್ರದೇಶದ ಶಾಲೆಗಳ ಬಹುತೇಕ ಕಾರ್ಯಗಳೆಲ್ಲವೂ ಇನ್ನು ಮುಂದೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ (ಆರ್ಡಿಪಿಆರ್) ಸುಪರ್ದಿಗೆ ಒಳಪಡಲಿದೆ ಎಂದು ಶಿಕ್ಷಣ ಇಲಾಖೆಯ ಆಯುಕ್ತರು ಹೊರಡಿಸಿದ ಸುತ್ತೋಲೆಗೆ ಧಾರವಾಡ ಜಿಲ್ಲಾ ಶಿಕ್ಷಕರ ಸಂಘ ಅಸಮಾಧಾನ ಹೊರ ಹಾಕಿದೆ.
ಸುತ್ತೋಲೆ ಪ್ರಕಾರ ಶಾಲಾಡಳಿತವನ್ನು ಆರ್ಡಿಪಿಆರ್ಗೆ ವಹಿಸಿದ್ದು, ಕೆಲವೊಂದು ಅಂಶಗಳ ಬಗ್ಗೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲಾಗಿದೆ. 2023-2024 ಆಯವ್ಯಯದಲ್ಲಿ ಘೋಷಿಸಿರುವ ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತುತ ಇಪ್ಪತ್ತಾರು ಕಾರ್ಯಕ್ರಮಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಿ ವಿಕೇಂದ್ರೀಕರಣಗೊಳಿಸಲಾಗಿದೆ. ಈ ವಿಕೇಂದ್ರೀಕರಣ ಕಾರ್ಯ ಚಟುವಟಿಕೆಗಳ ಬಗ್ಗೆ ಉನ್ನತ ಅಧಿಕಾರಿಗಳ ಹಂತದಲ್ಲಿ ಚಿಂತನ ನಡೆದಿದೆ ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯಾದ್ಯಂತ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸಂವಿಧಾನಬದ್ಧ ಸಂಸ್ಥೆಯಾಗಿ ಪಾಲಕರ ಪರಿಷತ್ ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಅಡಿ ಮೀಸಲಾತಿ ಅನ್ವಯವೇ ಎಸ್ಡಿಎಂಸಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನ ಗುರುಗಳು, ಕ್ಲಸ್ಟರ್ ಸಮನ್ವಯಾಧಿಕಾರಿಗಳು ಕ್ಷೇತ್ರ ಸಮನ್ವಯಾಧಿಕಾರಿಗಳು ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರು, ಉಪಸಮನ್ವಯಾಧಿಕಾರಿಗಳು, ಶಿಕ್ಷಣಾಧಿಕಾರಿಗಳು, ಹಿರಿಯ ಉಪನ್ಯಾಸಕರು, ಕಿರಿಯ ಉಪನ್ಯಾಸಕರು ಡಯಟ್ ಪ್ರಾಚಾರ್ಯರು, ಉಪನಿರ್ದೇಶಕರು ಆಡಳಿತ ಅಭಿವೃದ್ಧಿ ಮೂರು ನಿರ್ದೇಶಕರು, ಸಹನಿರ್ದೇಶಕರು ರಾಜ್ಯ ವಿಭಾಗೀಯ ಆಯುಕ್ತರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಯೋಜನಾ ನಿರ್ದೇಶಕರು, ಗುಣಮಟ್ಟ ಮೌಲ್ಯಮಾಪನ ಮಂಡಳಿ ನಮ್ಮದೇ ಇಲಾಖೆಯ ನಮ್ಮ ಸಚಿವರು ಹೀಗೆ ಎಲ್ಲ ಹಂತದಲ್ಲೂ ಮೇಲುಸ್ತುವಾರಿ ನೋಡಲ್ ಅನುಷ್ಠಾನ ಅಧಿಕಾರಿಗಳಿದ್ದು, ಅವರು ಶೈಕ್ಷಣಿಕ ಚಟುವಟಿಕೆಗಳ ವೀಕ್ಷಣೆ, ಪರಿಶೀಲನೆ ನಡೆಯುತ್ತಿದೆ.
ಆದರೆ, ಈಗ ಅದನ್ನು ಮತ್ತೆ ಆರ್ಡಿಪಿಆರ್ ಇಲಾಖೆಗೆ ವಹಿಸುವ ಅವಶ್ಯಕತೆ ಇಲ್ಲ. ಆದ್ದರಿಂದ ಈ ಶೈಕ್ಷಣಿಕ ವಿಷಯ ಹೊರತುಪಡಿಸಿ ಉಳಿದಂತೆ ಶಾಲೆಗೆ ಕುಡಿಯುವ ನೀರು, ಕಂಪೌಂಡ್, ವಿದ್ಯುತ್, ಆಟದ ಮೈದಾನ, ಕೊಠಡಿಗಳು ಸೇರಿದಂತೆ ಭೌತಿಕ ಸೌಲಭ್ಯಗಳು, ಪಂಚಾಯಿತಿ ವತಿಯಿಂದ ಅತಿಥಿ ಶಿಕ್ಷಕರ ನೇಮಕ ಇವುಗಳ ಜವಾಬ್ದಾರಿ ವಹಿಸಲಿ. ಇದರಿಂದ ಶಾಲೆಗಳ ಭೌತಿಕ ಸೌಲಭ್ಯಗಳು ಈಡೇರಬಹುದು.
ಆದರೆ, ಗ್ರಾಮೀಣಾಭಿವೃದ್ದಿ ಇಲಾಖೆ ಶಾಲೆ ಆವರಣ ಪ್ರವೇಶ ಮಾಡುವುದರಿಂದ ಶಾಲೆಗಳಲ್ಲಿ ರಾಜಕೀಯ ಪ್ರವೇಶ ಮಾಡುವ ಆತಂಕವಿದೆ. ಸರ್ಕಾರ ಇದಕ್ಕೆ ಅವಕಾಶ ನೀಡಬಾರದು. ಇದನ್ನು ಮರುಪರಿಶೀಲಿಸುವಂತೆ ಶಿಕ್ಷಕರ ವತಿಯಿಂದ ಸರ್ಕಾರಕ್ಕೆ ಆಗ್ರಹಿಸಿ ವಿಧಾನ ಪರಿಷತ್ ಸಭಾಪತಿಗಳಿಗೆ, ಮುಖ್ಯ ಮಂತ್ರಿಗಳಿಗೆ, ಉಪಮುಖ್ಯ ಮಂತ್ರಿಗಳು, ವಿಧಾನ ಪರಿಷತ್ ಸದಸ್ಯರು, ಶಿಕ್ಷಣ ಸಚಿವರು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸಹ ಪತ್ರ ಬರೆದು ಆಗ್ರಹಿಸಲಾಗಿದೆ.
ಸರ್ಕಾರ ಈ ಸುತ್ತೊಲ್ಲೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಇದೇ ವೇಳೆ ಶಿಕ್ಷಕರ ಸಂಘ ಒತ್ತಾಯಿಸಿದೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಇದೇ ವೇಳೆ ನೀಡಲಾಗಿದೆ.
ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಲ್ಲಿ ಡಿಕೆಶಿ ಹಸ್ತಕ್ಷೇಪ ಮಾಡುತ್ತಿಲ್ಲ : ಶಾಸಕ ಬಾಬಾಸಾಹೇಬ ಪಾಟೀಲ