ಹುಬ್ಬಳ್ಳಿ: ಕೇಂದ್ರ ದತ್ತು ಸ್ವೀಕಾರ ಸಂಪನ್ಮೂಲ ಪ್ರಾಧಿಕಾರದ (ಕಾರಾ) ಮಾರ್ಗಸೂಚಿಗಳ ಅನ್ವಯ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸುವಲ್ಲಿ ಧಾರವಾಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಹೆಚ್.ಲಲಿತಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹುಬ್ಬಳ್ಳಿಯ ಅಮೂಲ್ಯ (ಜಿ) ಶಿಶು ಗೃಹ ಇವರ ಸಹಯೋಗದಲ್ಲಿ ಘಂಟಿಕೇರಿಯ ಬಾಲಕಿಯರ ಸರ್ಕಾರಿ ಬಾಲ ಮಂದಿರದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನವೆಂಬರ್ 2020ನ್ನು ಅಂತಾರಾಷ್ಟ್ರೀಯ ದತ್ತು ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಮಕ್ಕಳ ರಕ್ಷಣಾ ನಿರ್ದೇಶನಾಲಯವು ಅನಾಥ, ಪರಿತ್ಯಕ್ತ, ಒಪ್ಪಿಸಲ್ಪಟ್ಟ ಮಕ್ಕಳನ್ನು ರಕ್ಷಣೆ ನೀಡಿ ಪ್ರೋತ್ಸಾಹಿಸುತ್ತಿದೆ. ಮಕ್ಕಳ ರಕ್ಷಣಾ ಘಟಕ ಅಡಿಯಲ್ಲಿ ಅಮೂಲ್ಯ (ಜಿ) ಶಿಶುಗೃಹ 2005ನೇ ಇಸವಿಯಿಂದ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯವರೆಗೆ ಒಟ್ಟು 113 ಮಕ್ಕಳನ್ನು ಸ್ವದೇಶಿ ಮತ್ತು ವಿದೇಶಿ ಪ್ರಕ್ರಿಯೆಯಲ್ಲಿ ದತ್ತು ನೀಡಲಾಗಿದೆ. ಮಕ್ಕಳನ್ನು ಕಾನೂನಿನ ಮೂಲಕ ಅರ್ಜಿ ಸಲ್ಲಿಸಿ ದತ್ತು ಪಡೆಯಬೇಕು. ಬಹಳಷ್ಟು ಜನರು ದತ್ತು ಸ್ವೀಕರಿಸುವುದಕ್ಕೆ ಮುಂದೆ ಬರುತ್ತಿರುವುದು ಶ್ಲಾಘನೀಯ ಎಂದರು.