ಧಾರವಾಡ: ಜನವರಿ ತಿಂಗಳ ಕೊನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದ ಅಪಘಾತದಲ್ಲಿ ಮೃತಪಟ್ಟಿದ್ದ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಇಬ್ಬರು ಯುವತಿಯರ ಅಪಘಾತ ಪ್ರಕರಣ ಇದೀಗ ಮತ್ತೊಂದು ಹೊಸ ಸ್ವರೂಪ ಪಡೆದುಕೊಂಡಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವತಿಯರು ಕಚೇರಿ ಕೆಲಸವಿದೆ ಎಂದು ಹೇಳಿ ಕೃವಿವಿ ಕುಲಪತಿ ಆಪ್ತ ಕಾರ್ಯದರ್ಶಿ ಎಂ.ಎ.ಮುಲ್ಲಾ ಅವರೊಂದಿಗೆ ಗೋವಾಗೆ ಹೋಗಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಧಾರವಾಡದ ವಿವಿಧ ಸಂಘಟನೆಗಳು ಹೋರಾಟದ ಹಾದಿ ಕೂಡ ತುಳಿದಿವೆ.
ಧಾರವಾಡ ಮೂಲದ ಯುವತಿಯರು ಕೃಷಿ ವಿಶ್ವವಿದ್ಯಾಲಯದ ವಿಸಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಜ. 31ರಂದು ಗೋವಾದಿಂದ ಕಾರಿನಲ್ಲಿ ಬರುತ್ತಿರುವಾಗ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಾಸ್ತಿಕಟ್ಟಿ ಬಳಿ ನಡೆದ ಅಪಘಾತದಲ್ಲಿ ಇಬ್ಬರೂ ಯುವತಿಯರು ಮೃತಪಟ್ಟಿದ್ದರು. ಆದ್ರೆ ಅವರೊಂದಿಗೆ ಕಾರಿನಲ್ಲಿ ವಿಸಿ ಆಪ್ತ ಕಾರ್ಯದರ್ಶಿ ಎಂ.ಎ.ಮುಲ್ಲಾ ಇದ್ದರು. ಅಷ್ಟೇ ಅಲ್ಲ, ಇಬ್ಬರೂ ಯುವತಿಯರನ್ನು ಮುಲ್ಲಾನೇ ಗೋವಾಕ್ಕೆ ಕರೆದುಕೊಂಡು ಹೋಗಿದ್ದ ಎನ್ನುವ ಆರೋಪ ಕೇಳಿ ಬಂದಿದೆ. ಆದರೆ ಯುವತಿಯರು ಮಾತ್ರ ಮನೆಯಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ಕೆಲಸ ನಿಮಿತ್ತ ಹೋಗುತ್ತಿರೋದಾಗಿ ಹೇಳಿದ್ದರಂತೆ.
ಓದಿ:ಹುಬ್ಬಳ್ಳಿ: ರೈಲ್ವೆ ಇಂಜಿನಿಯರ್ ಕಚೇರಿ ಮೇಲೆ ಸಿಬಿಐ ದಾಳಿ
ಆದರೆ, ಇದೀಗ ಹೀಗೆ ಮುಲ್ಲಾನೊಂದಿಗೆ ಗೋವಾಕ್ಕೆ ಹೋಗಲು ಕಾರಣ ಆತನ ಕಿರುಕುಳ ಎಂಬುದು ಓರ್ವ ಯುವತಿ ತನ್ನ ಆತ್ಮೀಯರೊಂದಿಗೆ ನಡೆಸಿದ ವಾಟ್ಸಪ್ ಚಾಟ್ನಿಂದ ಬಯಲಿಗೆ ಬಂದಿದೆ. ಇದೇ ಕಾರಣಕ್ಕೆ ಪ್ರಕರಣದ ತನಿಖೆ ನಡೆಯಬೇಕು ಎಂಬ ಕೂಗು ಕೇಳಿ ಬಂದಿದೆ. ಗುತ್ತಿಗೆಯ ಕೆಲಸವನ್ನು ಮುಂದುವರೆಸಲು ಆ ಯುವತಿಗೆ ಮುಲ್ಲಾ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪವೂ ಕೇಳಿ ಬಂದಿದೆ.
ಈ ಕುರಿತು ತನಿಖೆಗಾಗಿ ಕೃಷಿ ವಿವಿ ಕುಲಪತಿ ಮೂವರ ಸಮಿತಿ ರಚನೆ ಮಾಡಿದ್ದು, ಕುಲಪತಿ ರಚನೆ ಮಾಡಿರುವ ಸಮಿತಿ ಬದಲು ರಾಜ್ಯಪಾಲರು ಸಮಿತಿ ರಚನೆ ಮಾಡಿ ಯುವತಿಯರ ಸಾವಿಗೆ ನ್ಯಾಯ ಒದಗಿಸಬೇಕು ಎಂಬುದು ಹೋರಾಟಗಾರರ ವಾದವಾಗಿದೆ.