ಧಾರವಾಡ: ಉತ್ತರ ಕರ್ನಾಟಕದ ರೈತರ ಸಂಜೀವಿನಿಯಾಗಿ ಕೆಲಸ ಮಾಡುತ್ತಿರುವ ಕೃಷಿ ವಿಶ್ವವಿದ್ಯಾಲಯ ಕೇಂದ್ರ ಸರ್ಕಾರದ ಭಾರತೀಯ ಕೃಷಿ ಅನುಸಂಧಾನ ಪರಿಷತ್ನಿಂದ ನೀಡಲಾದ ಱಂಕಿಂಗ್ನಲ್ಲಿ ದೇಶದ 9ನೇ ಅತ್ಯುತ್ತಮ ಹಾಗೂ ಕರ್ನಾಟಕದ ನಂಬರ್ 1 ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ.
ಈ ವರ್ಷ ಘೋಷಿಸಲಾದ ಱಂಕಿಂಗ್ ಪಟ್ಟಿಯಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ ದೇಶದ 9ನೇ ಅತ್ಯುತ್ತಮ ಕೃಷಿ ವಿಶ್ವವಿದ್ಯಾಲಯದ ಸ್ಥಾನ ಪಡೆದುಕೊಂಡಿದೆ. ದೇಶದಲ್ಲಿ 74 ಕೃಷಿ ವಿಶ್ವವಿದ್ಯಾಲಯಗಳನ್ನು ಪರಿಗಣಿಸಿ ಈ ಱಂಕಿಂಗ್ ನೀಡಲಾಗಿದೆ. ಕಳೆದ ವರ್ಷ ಧಾರವಾಡ ಕೃಷಿ ವಿಶ್ವವಿದ್ಯಾಲಯ ದೇಶದಲ್ಲಿ 16 ನೇ ಱಂಕ್ ಪಡೆದುಕೊಂಡು ರಾಜ್ಯಕ್ಕೆ ಫಸ್ಟ್ ಱಂಕ್ ಪಡೆದುಕೊಂಡಿತ್ತು. ಈ ಸಲ ಕೂಡ ರಾಜ್ಯದ ನಂ.1 ಅಗ್ರ ಶ್ರೇಯಾಂಕದಲ್ಲಿ ಮುಂದುವರೆದಿದೆ ಎಂದು ಕುಲಪತಿ ಡಾ. ಎಂ. ಬಿ ಚೆಟ್ಟಿ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ 14 ಜಿಲ್ಲೆಗಳ ವ್ಯಾಪ್ತಿಯಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯವ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಉತ್ತರ ಕರ್ನಾಟಕದ ರೈತರ ಪಾಲಿಗೆ ಈ ವಿಶ್ವ ವಿದ್ಯಾಲಯ ಕೃಷಿ ಸಂಜೀವಿನಿಯಂತೆ ಕೆಲಸ ಮಾಡುತ್ತಿದೆ. ಅದೆಲ್ಲವನ್ನೂ ನೋಡಿ ಕೃಷಿ ಅನುಸಂಧಾನ ಪರಿಷತ್ ಅಗ್ರ ಶ್ರೇಣಿ ಶ್ರೇಯಾಂಕ ನೀಡಿದೆ. ಇದು ರೈತರ ಪಾಲಿಗೆ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.