ಹುಬ್ಬಳ್ಳಿ: ದೇಶದಲ್ಲಿ ತನ್ನದೇ ಕೀರ್ತಿಯನ್ನು ಹೊಂದಿರುವ ಕೆಎಲ್ಇ (ಕರ್ನಾಟಕ ಲಿಂಗಾಯತ ಶಿಕ್ಷಣ) ಸಂಸ್ಥೆ ಮೂರುಸಾವಿರ ಮಠದ ಭೂಮಿಯನ್ನು ದಾನವಾಗಿ ಪಡೆದಿದ್ದು ಖಂಡನೀಯವಾಗಿದೆ. ಕೂಡಲೇ ಕೆಎಲ್ಇ ಸಂಸ್ಥೆಯು ದಾನವಾಗಿ ಪಡೆದ ಭೂಮಿಯನ್ನು ಮಠಕ್ಕೆ ಮರಳಿಸುವಂತೆ ಮೂರುಸಾವಿರ ಮಠದ ಭಕ್ತರಾದ ನಿರಂಜನ ಹಿರೇಮಠ ಹಾಗೂ ಪೀರಾಜಿ ಖಂಡೇಕರ ಒತ್ತಾಯಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಮೂರುಸಾವಿರ ಮಠ ತುಂಬಾ ಆರ್ಥಿಕ ತೊಂದರೆಯಲ್ಲಿದೆ. ಮಠದಲ್ಲಿ ನಡೆಯುವ ನಿರಂತರ ದಾಸೋಹಕ್ಕೂ ಸಂಕಷ್ಟ ಪರಿಸ್ಥಿತಿ ಇದೆ. ಹೀಗಿರುವಾಗ ಕೆಎಲ್ಇ ಸಂಸ್ಥೆ ಮಠಕ್ಕೆ ಯಾವುದೇ ಸಹಾಯ ಹಸ್ತ ಚಾಚದೇ ತರಾತುರಿಯಲ್ಲಿ ಮಠದ ಆಸ್ತಿಯನ್ನು ದಾನವಾಗಿ ಪಡೆದಿದ್ದು, ಭಕ್ತರಲ್ಲಿ ಗೊಂದಲ ಸೃಷ್ಟಿಸಿದೆ ಎಂದರು.
ಕೆಎಲ್ಇ ಸಂಸ್ಥೆ ಹುಬ್ಬಳ್ಳಿಯಲ್ಲಿಯೇ ನೂರಾರು ಎಕರೆ ಆಸ್ತಿಯನ್ನು ಹೊಂದಿದೆ. ಹೀಗಿದ್ದರೂ ಮಠದ ಆಸ್ತಿಯನ್ನು ಏಕೆ ದಾನವಾಗಿ ಪಡೆದಿದೆ ಎಂಬುದು ಮಠದ ಭಕ್ತರಿಗೆ ಯಕ್ಷಪ್ರಶ್ನೆಯಾಗಿದೆ. ಹೀಗಾಗಿ ಸಂಸ್ಥೆ ಈ ಗೊಂದಲಗಳಿಗೆ ತೆರೆ ಎಳೆಯಲು ಮಠದ ಆಸ್ತಿಯನ್ನು ಮರಳಿಸಲಿ. ಸಂಸ್ಥೆ ತನ್ನ ಹೆಸರನ್ನು ಉಳಿಸಿಕೊಳ್ಳಲಿ ಎಂದು ಆಗ್ರಹಿಸಿದರು.