ಹುಬ್ಬಳ್ಳಿ: ನೇಕಾರ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಹೊಡೆದಾಡಿದ್ದಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಹಳೇ ಹುಬ್ಬಳ್ಳಿ ಪೋಲಿಸರು ಬಂಧಿಸಿದ್ದಾರೆ.
ರವಿವಾರ ರಾತ್ರಿ ನೇಕಾರ ನಗರದ ಬ್ಯಾಹಟ್ಟಿ ಪ್ಲಾಟ್ನಲ್ಲಿ ರಣದಮ್ಮ ಕಾಲೋನಿಯ ಆಕಾಶ ಕೊಸಗಿ (23) ಎಂಬುವವ ತನ್ನ ಸ್ನೇಹಿತನೊಂದಿಗೆ ಕುಳಿತಾಗ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ನಂತರ ಜಗಳ ಪ್ರಾರಂಭವಾಗಿ, ಜಗಳ ಅತಿರೇಕಕ್ಕೆ ಹೋದಾಗ ತನ್ನ ಸ್ನೇಹಿತ ಗಣೇಶ ಪೇಟೆಯ ಕುಂಬಾರ ಓಣಿಯ ಸಿದ್ದಾರ್ಥ ಮಲ್ಲಿಕಾರ್ಜುನ ಕಲ್ಯಾಣಿ (23) ಎಂಬುವವರಿಗೆ ಬೆನ್ನಿಗೆ ಚಾಕುವಿನಿಂದ ಹೊಡೆದಿದ್ದಾನೆ.
ಹಾಗಾಗಿ ಇದರಿಂದ ಕೋಪಗೊಂಡ ಸಿದ್ದಾರ್ಥನ ಗೆಳೆಯ ರಣದಮ್ಮ ಕಾಲೋನಿಯ ನಿವಾಸಿ ಬಾಲಾಜಿ ನಾರಾಯಣ ಗುರಮ್ (21) ತನ್ನ ಸ್ನೇಹಿತ ಸಿದ್ದಾರ್ಥನಿಗೆ ಏಕೆ ಚಾಕುವಿನಿಂದ ಹೊಡೆದೆ ಎಂದು ಆಕಾಶ ಕೊಸಗಿ ಎಂಬುವವನ ಹೊಟ್ಟೆಗೆ ಹೊಡೆದಿದ್ದಾನೆ. ಪರಿಣಾಮ ಆಕಾಶ ಗಂಭೀರವಾಗಿ ಗಾಯಗೊಂಡಿದ್ದನು. ನಂತರ ಆಕಾಶನ ಸ್ನೇಹಿತ ಮಂಜುನಾಥ ಪಾಟೀಲ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡ ಪೋಲಿಸರು ಸಿದ್ದಾರ್ಥ ಕಲ್ಯಾಣಿ, ಬಾಲಾಜಿ ಗುರಮ್ ಎಂಬುವವರನ್ನು ಬಂಧಿಸಿದ್ದಾರೆ. ಗಾಯಗೊಂಡ ಆಕಾಶ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.