ಧಾರವಾಡ : ನಗರದ ಬಾಸೆಲ್ ಮಿಶನ್ ಇಂಗ್ಲೀಷ್ ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರು ನೀಡಿದ ದೂರಿನನ್ವಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇಂದು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಭೇಟಿಯ ಸಮಯದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಕೆಲವು ಮಕ್ಕಳು ಶಾಲಾ ಶುಲ್ಕ ತುಂಬಿರುವುದಿಲ್ಲ ಮತ್ತು ಕೆಲವು ಮಕ್ಕಳಿಗೆ ನಿಗದಿತ ಗೃಹಪಾಠವನ್ನು ಮುಗಿಸಿಲ್ಲ ಎಂಬ ಕಾರಣಕ್ಕಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದಿಲ್ಲ ಎಂಬ ಅಂಶವನ್ನು ಗಮನಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕರನ್ನು ವಿಚಾರಿಸಿ, ಇನ್ನು ಮುಂದೆ ಇಂಥ ದೂರುಗಳು ಬರದಂತೆ ಕ್ರಮವಹಿಸಲು ಸೂಚಿಸಲಾಗಿದೆ. ಈ ರೀತಿಯ ವಿಚಾರಗಳನ್ನು ಶಾಲಾ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಶಿಕ್ಷಕರುಗಳ ಮತ್ತು ಪಾಲಕರ ಸಭೆಯನ್ನು ಕರೆದು ಬಗೆ ಹರಿಸಿಕೊಳ್ಳುಬೇಕು. ಮಕ್ಕಳಿಗೆ ಪರೀಕ್ಷೆ ಬರೆಯದಂತೆ ತಡೆ ಹಿಡಿಯುವುದು ಮತ್ತು ಮಕ್ಕಳಿಗೆ ಅನವಶ್ಯಕ ತೊಂದರೆ ನೀಡಿದ್ದಲ್ಲಿ ಅದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಇಂಥಾ ಪ್ರಕರಣಗಳು ಪುನರಾವರ್ತನೆಯಾದರೆ ಶಾಲೆಯ ಮಾನ್ಯತೆ ಹಿಂದಕ್ಕೆ ಪಡೆದುಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.