ಹುಬ್ಬಳ್ಳಿ: ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಬೆಸ್ಕಾಂ ನಿರ್ಲಕ್ಷ್ಯದಿಂದ ತಾಯಿ, ಮಗು ಮೃತಪಟ್ಟ ಘಟನೆ ಸಂಭವಿಸಿದ್ದರೂ ಕೂಡ ಹೆಸ್ಕಾಂ ಎಚ್ಚೆತ್ತುಕೊಂಡಂತಿಲ್ಲ. ಇಲ್ಲಿನ ಮರಾಠ ಗಲ್ಲಿಯಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಪಕ್ಕದ ಟ್ರಾನ್ಸ್ ಫಾರ್ಮರ್ ಭಯದ ವಾತಾವರಣ ಉಂಟು ಮಾಡುತ್ತಿದೆ.
ಎಲ್ಲೆಂದೆರಲ್ಲಿ ತುಂಡಾಗಿ ಬಿದ್ದಿರುವ ಕೇಬಲ್, ತಲೆಗೆ ತಾಗುವಂತಿರುವ ವಿದ್ಯುತ್ ಪ್ರವಹಿಸುವ ಕೇಬಲ್, ಶಾಲೆಯ ಕಟ್ಟಡಕ್ಕೆ ಹೊಂದಿಕೊಂಡಿರುವ ವಿದ್ಯುತ್ ಕಂಬಗಳು. ಇವೆಲ್ಲವೂ ಅಪಘಾತಕ್ಕೆ ಆಹ್ವಾನ ನೀಡುವಂತಿದ್ದರೂ ಯಾರೊಬ್ಬರೂ ಕಾಳಜಿ ವಹಿಸುತ್ತಿಲ್ಲ. ಈಗಾಗಲೇ ಸ್ಥಳೀಯರು ಹಾಗೂ ಶಾಲೆಯ ಆಡಳಿತ ಮಂಡಳಿ ಹೆಸ್ಕಾಂ ಇಲಾಖೆಯ ಗಮನಕ್ಕೆ ತಂದಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಅದಷ್ಟು ಬೇಗ ಟ್ರಾನ್ಸ್ ಫಾರ್ಮರ್ ಸ್ಥಳಾಂತರ ಮಾಡಬೇಕೆಂದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನೂರಾರು ಮಕ್ಕಳು ಓದುವ ಶಾಲೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳ ಶೌಚಾಲಯವಿದ್ದರೂ ಟ್ರಾನ್ಸ್‌ಫಾರ್ಮರ್ ಬಳಿಯೇ ಮಕ್ಕಳು ಮೂತ್ರ ವಿಸರ್ಜನೆಗೆ ಹೋಗುತ್ತಾರೆ. ಅವರಿಗೆ ಅಷ್ಟು ತಿಳಿವಳಿಕೆ ಇಲ್ಲ. ಏನಾದರೂ ಅನಾಹುತವಾದರೆ ಯಾರು ಹೊಣೆ?. ಹೆಸ್ಕಾಂ ಅಧಿಕಾರಿಗಳು ತಮಗೆ ಬೇಕಾದಂತೆ ವರ್ತಿಸುತ್ತಿದ್ದಾರೆ. ಶಾಲೆಯ ಪಕ್ಕದಲ್ಲಿ ಎರಡು ಟ್ರಾನ್ಸ್ ಫಾರ್ಮರ್‌ಗಳನ್ನು ಸ್ಥಳಾಂತರ ಮಾಡಿದ್ದಾರೆ.
ಆದರೆ ನಾವು ಈಗಾಗಲೇ ಮಹಾನಗರ ಪಾಲಿಕೆ, ಹೆಸ್ಕಾಂ ಸೇರಿದಂತೆ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿದ್ದೇವೆ. ಇಷ್ಟಾದರೂ ಹೆಸ್ಕಾಂ ಸಿಬ್ಬಂದಿ ಎಚ್ಚೆತ್ತುಕೊಂಡಿಲ್ಲ.ಅನಾಹುತ ಸಂಭವಿಸುವ ಮುನ್ನ ಸ್ಥಳಾಂತರ ಮಾಡಬೇಕು. ಇಲ್ಲವಾದರೆ ಹೆಸ್ಕಾಂ ಕಚೇರಿ ಎದುರು ಮಕ್ಕಳ ಜೊತೆಗೂಡಿ ಪ್ರತಿಭಟನೆ ಮಾಡುತ್ತೇವೆ ಎಂದು ಶಾಲೆಯ ಕಾರ್ಯದರ್ಶಿ ನಾರಾಯಣ ಎಚ್ಚರಿಕೆ ನೀಡಿದರು.
ಇದಲ್ಲದೇ ನಗರದ ಹಲವೆಡೆ ಇಂತಹ ಅಪಾಯಕ್ಕೆ ಆಹ್ವಾನ ನೀಡುವ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ಫಾರ್ಮರ್ಗಳಿವೆ. ನಗರದ ಬಿಡನಾಳ, ಸಿಬಿಟಿ ಸೇರಿದಂತೆ ಬಹುತೇಕ ಕಡೆಯಲ್ಲಿ ಟ್ರಾನ್ಸ್‌ಫಾರ್ಮರ್ ಹಾಗೂ ಕೇಬಲ್ ಅವ್ಯವಸ್ಥೆ ಜನರ ಜೀವ ಪಡೆಯಲು ತುದಿಗಾಲಲ್ಲಿ ನಿಂತಂತಿವೆ. ಇಂತಹ ಬಹುದೊಡ್ಡ ಅವ್ಯವಸ್ಥೆ ಕಣ್ಣ ಮುಂದಿದ್ದರೂ ಹೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸಿಲ್ಲ. ಇನ್ನು ಪಾದಚಾರಿಗಳಿಗೆ ಸಂಕಷ್ಟ ತಂದೊಡ್ಡುವ ಅದೆಷ್ಟೋ ಅವ್ಯವಸ್ಥೆ ಇದ್ದರೂ ಕೂಡ ಹೆಸ್ಕಾಂ ಇಲಾಖೆ ನಿದ್ದೆಗೆ ಜಾರಿದೆ. ಕೂಡಲೇ ಹೆಸ್ಕಾಂ ಸಿಬ್ಬಂದಿ ಹಾಗೂ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಜರುಗಿಸಿ ಸಂಭವಿಸಬಹುದಾದ ಅಪಘಾತಕ್ಕೆ ಬ್ರೇಕ್ ಹಾಕುಬೇಕು ಎಂಬುದು ಸ್ಥಳೀಯರ ಒತ್ತಾಯ.
ಇದನ್ನೂ ಓದಿ: ಬೆಂಗಳೂರಲ್ಲಿ ವಿದ್ಯುತ್ ತಂತಿ ತುಳಿದು ತಾಯಿ, ಮಗು ಸಾವು: ಸರ್ಕಾರಕ್ಕೆ ಎನ್ಹೆಚ್ಆರ್ಸಿ ನೋಟಿಸ್