ಧಾರವಾಡ : ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಭಾರತ ಚುನಾವಣಾ ಆಯೋಗವು ದಿನಾಂಕ ಘೋಷಿಸಿದ್ದು, ಮಾದರಿ ನೀತಿ ಸಂಹಿತೆಯು ಜಿಲ್ಲೆ ಮತ್ತು ಕ್ಷೇತ್ರ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ಜಾರಿಗೆ ಬಂದಿದೆ. ಜಿಲ್ಲೆಯ ಪದವೀಧರ ಮತದಾರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಇನ್ನೂ ಕಾಲಾವಕಾಶ ಇದೆ. ತಹಸೀಲ್ದಾರ್ ಕಚೇರಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅರ್ಜಿಗಳನ್ನು ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಸಂಜೆ ಚುನಾವಣೆ ಸಿದ್ಧತೆ ಮತ್ತು ಮಾದರಿ ನೀತಿ ಸಂಹಿತೆ ಜಾರಿ ಕುರಿತು ಸಭೆ ನಡೆಸಿದ ಅವರು, ಅಕ್ಟೋಬರ್ 1 ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ. ಅ.8 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಅ.9 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅ.12 ಕೊನೆಯ ದಿನವಾಗಿದೆ. ಅ.28 ರಂದು ಮತದಾನ ನಡೆಯಲಿದೆ. ನವೆಂಬರ್ 2 ರಂದು ಮತಗಳ ಎಣಿಕೆ ಕಾರ್ಯ ನಡೆದು ,ನ.5 ಕ್ಕೆ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಬೇಕು. ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಚುನಾವಣೆ ಆಯೋಗ ಸೂಚಿಸುವ ಎಲ್ಲಾ ನಿರ್ದೇಶನಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು.
ಜಿಲ್ಲೆಯಲ್ಲಿ ಅಗತ್ಯಕ್ಕೆ ಅನುಸಾರವಾಗಿ ವಿಡಿಯೋ ವೀಕ್ಷಣಾ ದಳ, ಸಂಚಾರಿ ವಿಚಕ್ಷಣಾ ದಳಗಳನ್ನು ನೇಮಿಸಿ ನಿಗಾ ವಹಿಸಲಾಗುವುದು. ಈ ಬಾರಿ ಚುನಾವಣೆಗಳಲ್ಲಿ ಕೋವಿಡ್ ಸಂಬಂಧಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರು ಅಧಿಕೃತ ಮತ್ತು ಖಾಸಗಿ ಕಾರ್ಯಗಳಿಗೆ ಷರತ್ತಿಗೊಳಪಟ್ಟು ಸರ್ಕಾರಿ ವಾಹನ, ಭದ್ರತೆ ಬಳಸಬಹುದು. ಆದರೆ ಪೈಲಟ್ ವಾಹನದ ಸೈರನ್ ಹಾಕಬಾರದು. ಚುನಾವಣೆ ಸಂಬಂಧಿತ ಕಾರ್ಯ ಚಟುವಟಿಕೆಗಳಿಗೆ ಸರ್ಕಾರಿ ವಾಹನ ಬಳಸಲು ಅವಕಾಶವಿಲ್ಲ. ಉಳಿದಂತೆ ನಿಗಮ, ಮಂಡಳಿಗಳು, ಸ್ಥಳೀಯ ಪ್ರಾಧಿಕಾರ, ಸಂಸ್ಥೆಗಳ ಅಧ್ಯಕ್ಷರಿಗೆ ನೀಡಿರುವ ಸರ್ಕಾರಿ ವಾಹನಗಳನ್ನು ತಕ್ಷಣ ಹಿಂಪಡೆಯಬೇಕು ಎಂದರು
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಚುನಾವಣಾ ಆಯೋಗದ ನಿರ್ದೇಶನಗಳನ್ನು ಸಭೆಗೆ ವಿವರಿಸಿದರು