ಹುಬ್ಬಳ್ಳಿ: ಪಾಕಿಸ್ತಾನದ ವಿರುದ್ಧ ನಡೆದ ಎರಡು ಯುದ್ದಗಳಲ್ಲಿ ಜಯಗಳಿಸಿದ್ದ ಭಾರತೀಯ ಸೇನೆಯ ಸುಬೇದಾರ್ ರಂಗಪ್ಪ ಎಫ್ ಕವಡಿಗಟ್ಟಿ (76) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಇಲ್ಲಿನ ಲೋಕಪ್ಪನ ಹಕ್ಕಲು ವಾಸಿವಾಗಿರುವ ರಂಗಪ್ಪ ಇತ್ತೀಚಿಗೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಮಂಗಳವಾರ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಎರಡು ಕೋವಿಡ್ ವರದಿಗಳು ನೆಗೆಟಿವ್ ಬಂದಿದ್ದವು. ಮಂಗಳವಾರ ಬಂದ ಮೂರನೇ ವರದಿ ಮಾತ್ರ ‘ಪಾಸಿಟಿವ್’ ಆಗಿತ್ತು. ಕೋವಿಡ್ ನಿಯಮಾನುಸಾರ ಬುಧವಾರ ಜಿಲ್ಲಾಡಳಿತ ಅಂತ್ಯಕ್ರಿಯೆ ನೆರವೇರಿಸಿದೆ.
ಇವರು ಶತ್ರು ದೇಶ ಪಾಕಿಸ್ತಾನದ ವಿರುದ್ಧ ನಡೆದ ಎರಡು ಯುದ್ಧ (1965, 1971) ಗಳಲ್ಲಿ ವೀರಸೇನಾನಿಯಾಗಿ ಹೋರಾಡಿ ಭಾರತದ ಗೆಲುವಿಗೆ ಕಾರಣರಾಗಿದ್ದರು. ಮೂಲತಃ ಬಾದಾಮಿ ತಾಲೂಕು ಹಂಗರಗಿ ಗ್ರಾಮದವರಾದ ಈ ಯೋಧ, ಸೇನಾ ನಿವೃತ್ತಿಯ ಬಳಿಕ ನಗರದಲ್ಲಿ ವಾಸವಾಗಿ ಸೇನೆಗೆ ಸೇರುವಂತೆ ಯುವಕರನ್ನು ಹುರಿದುಂಬಿಸುತ್ತಿದ್ದರು. ಇವರ ಇಬ್ಬರು ಪುತ್ರರು ಸೈನಿಕರಾಗಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ.