ಧಾರವಾಡ: ಅಕ್ಟೋಬರ್ 28 ರಂದು ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಡೆಯುತ್ತಿರುವ ಕಾರಣ ಜಿಲ್ಲೆಯಾದ್ಯಂತ ಎಲ್ಲಾ ಸ್ಕ್ಯಾನಿಂಗ್, ಜೆರಾಕ್ಸ್ ಹಾಗೂ ಕಂಪ್ಯೂಟರ್ ಕೇಂದ್ರಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶಿಸಿದ್ದಾರೆ.
ಇದೇ 28 ರಂದು ಮತದಾನ ನಡೆಯಲಿದ್ದು, ಶಾಂತಿಯುತ ಚುನಾವಣೆ ನಡೆಸುವ ಉದ್ದೇಶದಿಂದ ಅಕ್ಟೋಬರ್ 27 ರ ಸಂಜೆ 5 ಗಂಟೆಯಿಂದ ಅಕ್ಟೋಬರ್ 28 ರ ಸಂಜೆ 5 ಗಂಟೆಯವರೆಗೆ ಜಿಲ್ಲೆಯಾದ್ಯಂತ ಎಲ್ಲಾ ಸ್ಕ್ಯಾನಿಂಗ್, ಜೆರಾಕ್ಸ್ ಹಾಗೂ ಕಂಪ್ಯೂಟರ್ ಸೆಂಟರ್‌ಗಳನ್ನು ಚುನಾವಣಾ ಅವಧಿಯಲ್ಲಿ ಕಾರ್ಯ ನಿರ್ವಹಿಸದಂತೆ ನಿರ್ಬಂಧಿಸಲಾಗಿದೆ.
ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಅನ್ವಯ ಈ ಆದೇಶ ಹೊರಡಿಸಲಾಗಿದ್ದು, ಉಲ್ಲಂಘಿಸುವ ಕೇಂದ್ರಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.