ಹುಬ್ಬಳ್ಳಿ : ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವುದು ನಿಯಂತ್ರಣದಲ್ಲಿದೆ. ಸಾರ್ವಜನಿಕರು ಅನಗತ್ಯ ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.
ಕಿಮ್ಸ್ ಆಸ್ಪತ್ರೆಯ 250 ಬೆಡ್ ಸೇರಿ ಇತರೆ ಸ್ಥಳಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ 500 ಬೆಡ್ಗಳನ್ನು ಗುರುತಿಸಲಾಗಿದೆ. ಎಲ್ಲಾ ರೀತಿಯ ಸೌಲಭ್ಯಗಳನ್ನು ಕೈಗೊಳ್ಳಾಗಿದೆ. ನುರಿತ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯದ ಹವಾಮಾನ ಸ್ಥಿತಿಯಲ್ಲಿ ಸೊಂಕು ಹರಡುವ ಸಂಭವ ಹೆಚ್ಚಿದೆ. ಜನರು ಅನಗತ್ಯ ಓಡಾಡುವುದನ್ನು ಕಡಿಮೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಬೇಕು ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಹ್ಯಾಂಡ್ ಸ್ಯಾನಿಟೈಜರ್ ಬಳಸುವುದು, ಜಿಲ್ಲೆಯಲ್ಲಿ ಹೆಚ್ಚಿನ ಕೋವಿಡ್ ತಪಾಸಣಾ ಪರೀಕ್ಷೆಗಳನ್ನು ಮಾಡುತ್ತಿರುವುದರಿಂದ ಹೆಚ್ಚು ಪ್ರಕರಣ ಬೆಳಕಿಗೆ ಬರುತ್ತಿವೆ. ಸ್ಟಾಫ್‌ನರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಸೂಕ್ತ ಪಿಪಿಇ ಕಿಟ್ ರಕ್ಷಣಾ ಸಲಕರಣೆಗಳೊಂದಿಗೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇವರ ಸೇವೆ ಅನುಪಮ. ಸಾರ್ವಜನಿಕರು ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ ನರ್ಸ್‍ಗಳಿಗೆ ಕೊರೊನಾ ಸೊಂಕು ತಗುಲಲಿದೆ ಎಂದು ಭಾವಿಸಿ ತಾರತಮ್ಯದಿಂದ ನೋಡುವುದನ್ನು ನಿಲ್ಲಿಸಬೇಕು ಎಂದರು.
ಸ್ಟಾಫ್ ನರ್ಸ್‍ಗಳಾದ ಮಂಜುಳಾ ಕೊತರೆ, ಕಮಲಾ, ಬಾಲಕೃಷ್ಣಾ, ಗಂಗಮ್ಮ ಬಳ್ಳಾರಿ, ಶ್ವೇತಾ ಬಣ್ಣಾ, ಆಶಾ ಎಸ್ ಬಿ, ಜ್ಯೊತಿ ಡಿ ಸಿ, ರಾಜೇಶ್ವರಿ ಹೆಚ್ ಸೇರಿ ಒಟ್ಟು ಹನ್ನೊಂದು ಜನರಿಗೆ ಗೌರವಾರ್ಥವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರಠಾಣಿ ಮತ್ತಿತರರು ಉಪಸ್ಥಿತರಿದ್ದರು.