ಧಾರವಾಡ : ರಾಜ್ಯ ಸರ್ಕಾರವು ಜನವರಿ 4ರಂದು ಹೊರಡಿಸಿರುವ ಆದೇಶದನ್ವಯ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 31 ನೋಂದಾಯಿತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದಿನಿಂದ ಶೇ.30ರಷ್ಟು ಹಾಗೂ ಜನವರಿ 10 ರಿಂದ ಶೇ.50ರಷ್ಟು ಬೆಡ್ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶಿಸಿದ್ದಾರೆ.
ಈ ಕುರಿತು ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಆನ್ಲೈನ್ ವೆಬೆಕ್ಸ್ ಮೂಲಕ ಸಭೆ (ವಿಡಿಯೋ ಸಂವಾದ) ಜರುಗಿಸಿ ಮಾತನಾಡಿದರು. ಆಸ್ಪತ್ರೆಗಳು ಹೊಂದಿರುವ ಐಸಿಯು, ಹೆಚ್‍ಡಿಯು, ವೆಂಟಿಲೇಟರ್ ಮತ್ತು ಜನರಲ್ ಬೆಡ್‍ಗಳಲ್ಲಿ ನಾಳೆಯಿಂದ ಶೇ.30ರಷ್ಟು ಹಾಗೂ ಜನವರಿ 10ರಿಂದ ಶೇ.50ರಷ್ಟು ಕೋವಿಡ್ ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಗಾಗಿ ಕಡ್ಡಾಯವಾಗಿ ಮೀಸಲಿಡಬೇಕು. ಈ ಕುರಿತು ಪರಿಶೀಲಿಸಲು ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡವನ್ನು ರಚಿಸಲಾಗುವುದು ಎಂದು ಅವರು ಹೇಳಿದರು.
ಕೋವಿಡ್ ಮೊದಲ ಮತ್ತು 2ನೇ ಅಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಎಲ್ಲ ಆಸ್ಪತ್ರೆ ಹಾಗೂ ವೈದ್ಯಕೀಯ ಸಿಬ್ಬಂದಿ ಉತ್ತಮ ಸಹಕಾರ ನೀಡಿದ್ದಾರೆ. ಈ 3ನೇ ಅಲೆ ಸಂದರ್ಭದಲ್ಲೂ ಎಲ್ಲ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಸಹಕಾರವನ್ನು ಜಿಲ್ಲಾಡಳಿತ ಬಯಸುತ್ತದೆ ಎಂದರು.
ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಸೋಂಕಿತ ಪ್ರಕರಣಗಳ ದರ ಹತ್ತು ದಿನಗಳಿಗೊಮ್ಮೆ ಎರಡುಪಟ್ಟು (ಡಬಲ್) ಹೆಚ್ಚಾಗುತ್ತಿತ್ತು. ಆದರೆ, ತಜ್ಞರು ತಿಳಿಸಿರುವಂತೆ ಈ 3ನೇ ಅಲೆಯಲ್ಲಿ ಡಬ್ಲಿಂಗ್ ದರ ಎರಡರಿಂದ ಮೂರು ದಿನಗಳಾಗಿದೆ.
ಈಗ ಸೋಂಕು ಬೇಗನೆ ವ್ಯಾಪಕವಾಗಿ ಹರಡುವುದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಬೇಕು. ಈ ಕುರಿತು ಎಲ್ಲ ಆಸ್ಪತ್ರೆ, ಔಷಧ ಅಂಗಡಿ ಹಾಗೂ ಇತರ ವ್ಯಾಪಾರಿ ಸ್ಥಳಗಳಲ್ಲಿ ಜಾಗೃತಿ ವಹಿಸಬೇಕೆಂದು ಅವರು ತಿಳಿಸಿದರು.
ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ತಪ್ಪದೇ ಮಾಸ್ಕ್ ಧರಿಸಿ ಹೋಗುವಂತೆ ಜಾಗೃತಿ ವಹಿಸಬೇಕು ಮತ್ತು ಮಕ್ಕಳು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸುವಂತೆ ನಿಗಾವಹಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಓದಿ: 2021ರಲ್ಲಿ ಬೆಂಗಳೂರಿನಲ್ಲಿ ಕಡಿಮೆ ಅಪರಾಧ ಪ್ರಕರಣಗಳು ದಾಖಲು : ಕಮಲ್ ಪಂತ್