ಹುಬ್ಬಳ್ಳಿ: ಧಾರವಾಡ ಎಸ್ಡಿಎಮ್ ಕಾಲೇಜಿನಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ನಾಳೆಯಿಂದ ಎಲ್ಲಾ ಕಡೆ ಕೋವಿಡ್ ಮಾರ್ಗಸೂಚಿಗಳ ಪಾಲನೆ ಹಾಗೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಹೇಳಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿಗಳು ಶಾಪಿಂಗ್ ಮಾಲ್, ಜಿಮ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಮಲ್ಟಿಪ್ಲೆಕ್ಸ್, ಸಿನಿಮಾ ಮಂದಿರಗಳ ಮಾಲೀಕರು ಹಾಗೂ ಧಾರ್ಮಿಕ ಮುಖಂಡರ ಜೊತೆ ಪ್ರತ್ಯೇಕ ಸಭೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಅವರು, ಎಲ್ಲಾ ಸಮುದಾಯದ ಮುಖಂಡರ ಜೊತೆ ಕೋವಿಡ್ ಲಸಿಕೆ ಪಡೆಯುವ ಬಗ್ಗೆ ಚರ್ಚೆ ಮಾಡಲಾಗಿದೆ. ಹುಬ್ಬಳ್ಳಿಯ ಕೆಲ ಪ್ರದೇಶಗಳಲ್ಲಿ ಲಸಿಕೆ ತೆಗೆದುಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಎಲ್ಲರ ಜೊತೆ ಚರ್ಚೆ ಮಾಡಿ ಲಸಿಕೆ ನೀಡಲು ತೀರ್ಮಾನಿಸಲಾಗಿದೆ.
ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿಸಲು ತೀರ್ಮಾನಿಸಲಾಗಿದೆ. ಚಿತ್ರಮಂದಿರಗಳು, ಕಲ್ಯಾಣ ಮಂಟಪ ಸೇರಿದಂತೆ ಕೆಲ ಕಡೆಗಳಲ್ಲಿ ಎರಡೂ ಡೋಸ್ ಲಸಿಕೆ ಪಡೆದರೆ ಮಾತ್ರ ಪ್ರವೇಶಕ್ಕೆ ಸೂಚಿಸಲಾಗಿದೆ. ಎಲ್ಲಾ ಮಾಲೀಕರಿಗೂ ಸೂಚನೆ ನೀಡಿದ್ದು, ನಾಳೆಯಿಂದ ಅವಳಿ ನಗರದಲ್ಲಿ ಕಟ್ಟು ನಿಟ್ಟಿನ ನಿಯಮಾವಳಿ ಜಾರಿಯಾಗಲಿದೆ ಎಂದರು.
ನೆರೆ ರಾಜ್ಯದ ವಿದ್ಯಾರ್ಥಿಗಳಿಂದ ಹೆಚ್ಚಾದ ಸೋಂಕು : ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ಜೀರೋ ಇತ್ತು. ಎಸ್ಡಿಎಮ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟನೆಯಿಂದ ದಿಢೀರ್ ಏರಿಕೆಯಾಗಿದೆ.
ಎಸ್ಡಿಎಮ್ನಲ್ಲಿ ವ್ಯಾಸಂಗ ಮಾಡುತ್ತಿರುವ ನೆರೆ ರಾಜ್ಯದ ವಿದ್ಯಾರ್ಥಿಗಳಿಂದ ಸೋಂಕು ಹೆಚ್ಚಳವಾಗಿದೆ. ಕಾಲೇಜಿನಲ್ಲಿ ಓದುತ್ತಿರುವ ನೆರೆ ರಾಜ್ಯದ ವಿದ್ಯಾರ್ಥಿಗಳು ತಮ್ಮ ರಾಜ್ಯಕ್ಕೆ ಹೋಗಿ ಬಂದಿದ್ದಾರೆ.
ಈ ಪೈಕಿ ಕೇರಳದ ಇಬ್ಬರು ಮತ್ತು ಮಹಾರಾಷ್ಟ್ರದ ಓರ್ವ ವಿದ್ಯಾರ್ಥಿಯಿಂದ ಕೋವಿಡ್ ಸೋಂಕು ಹರಡಿದೆ. ಆ ವಿದ್ಯಾರ್ಥಿಗಳನ್ನು ಐಸೋಲೇಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಇದು ರೂಪಾಂತರಿ ಕೋವಿಡ್ ವೈರಸ್ ಅಲ್ಲ. ಸದ್ಯ ಕಾಲೇಜಿನಲ್ಲಿ ಯಾವುದೇ ಹೊಸ ಪ್ರಕರಣ ಬಂದಿಲ್ಲ ಎಂದರು.
ಕಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಯಾವುದೇ ಪ್ರಕರಣ ಕಂಡು ಬಂದಿಲ್ಲ. ಆದರೂ ಹುಬ್ಬಳ್ಳಿ-ಧಾರವಾಡದ ಎಲ್ಲಾ ಕಾಲೇಜುಗಳಲ್ಲಿಯೂ ರ್ಯಾಂಡಮ್ ಟೆಸ್ಟ್ಗೆ ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿಂದು 315 ಮಂದಿಯಲ್ಲಿ ಕೊರೊನಾ ದೃಢ.. ಇಬ್ಬರು ಸೋಂಕಿಗೆ ಬಲಿ..