ಧಾರವಾಡ: ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳಿರುವ ವ್ಯಕ್ತಿಗಳ ಕೋವಿಡ್ ತಪಾಸಣೆ ವರದಿಯು ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ಕಂಡು ಬಂದರೆ ಕೂಡಲೇ ಅವರನ್ನು ಕಡ್ಡಾಯವಾಗಿ ಆರ್ ಟಿ ಪಿ ಸಿಆರ್ ಪರೀಕ್ಷೆಗೂ ಒಳಪಡಿಸಿ ಪ್ರಯೋಗಾಲಯ ಮಾದರಿ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ್ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂಜೆ ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಎಲ್ಲಾ ಸ್ವ್ಯಾಬ್ ಸಂಗ್ರಹಣೆ ಕೇಂದ್ರಗಳ ಅರೆ ವೈದ್ಯಕೀಯ ಹಾಗೂ ಸಹಾಯಕ ಸಿಬ್ಬಂದಿಗೂ ಈ ಕುರಿತು ಸ್ಪಷ್ಟ ಸೂಚನೆ ನೀಡಬೇಕು. ಮೊದಲ ಆದ್ಯತೆಯಡಿ ಆರ್‌ಎಟಿ ಕಿಟ್ ಪರೀಕ್ಷೆ ಕೈಗೊಳ್ಳಬೇಕು. ರೋಗ ಲಕ್ಷಣಗಳಿರುವ ವ್ಯಕ್ತಿಗಳ ವರದಿ ನೆಗೆಟಿವ್ ಕಂಡು ಬಂದರೆ ಕೂಡಲೇ ಆರ್‌ಟಿಪಿಸಿಆರ್ ತಪಾಸಣೆ ಮಾಡಿಸಿ ವರದಿಗಳನ್ನು ಅಪ್ ಡೇಟ್ ಮಾಡಬೇಕು ಎಂದರು.
ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ವೈದ್ಯಕೀಯ, ಅರೆವೈದ್ಯಕೀಯ ಸಿಬ್ಬಂದಿ ಶ್ರಮವಹಿಸಿ ಪ್ರತಿದಿನ ಸುಮಾರು 2,500 ಜನರನ್ನು ತಪಾಸಣೆಗೊಳಪಡಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಜಿಲ್ಲೆಯ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಸಂಬಂಧಿಸಿದ ಏಜೆನ್ಸಿಗಳ ಮುಂಜಾಗ್ರತೆಯೊಂದಿಗೆ ಕರ್ತವ್ಯ ನಿರ್ವಹಿಸಬೇಕು ಎಂದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.