ಧಾರವಾಡ: ಜಿಲ್ಲಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸಂಭವನೀಯ ಅತಿವೃಷ್ಟಿಯನ್ನು ಸಮರ್ಥವಾಗಿ ನಿರ್ವಹಿಸಿ ಜನ, ಜಾನುವಾರುಗಳ ರಕ್ಷಣೆಗೆ ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನಿತೇಶ ಕೆ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಅತಿವೃಷ್ಟಿ ನಿರ್ವಹಣೆಯ ಅಂತಿಮ ಹಂತದ ಸಿದ್ಧತೆಗಳ ಕುರಿತು ಪರಿಶೀಲನೆ ಸಭೆ ಜರುಗಿತು.
ಜಿಲ್ಲೆಯ 83 ಗ್ರಾಮಗಳು ಪ್ರವಾಹಕ್ಕೆ ಒಳಗಾಗಬಹುದು ಎಂದು ಹಿಂದಿನ ವರ್ಷಗಳ ಅನುಭವಗಳ ಆಧಾರದಲ್ಲಿ ಅಂದಾಜಿಸಲಾಗಿದೆ. ಎಲ್ಲ ಹಳ್ಳಿಗಳಲ್ಲಿ ಡಂಗುರ ಸಾರಿ ಜನರನ್ನು ಎಚ್ಚರಿಸಬೇಕು. ಹಳ್ಳಿಗಳಲ್ಲಿ ಸ್ಥಳೀಯ ಈಜುಗಾರರು, ಯುವಜನರನ್ನೊಳಗೊಂಡ ಸ್ವಯಂ ಸೇವಕರ ತಂಡ ರಚಿಸಿ ಅವರ ಸಂಪರ್ಕ ಸದಾ ಕಾಲ ಸಿಗುವಂತೆ ನೋಡಿಕೊಳ್ಳಬೇಕು. ಪರಿಹಾರ ಕೇಂದ್ರಗಳ ಸ್ಥಾಪನೆಗೆ ಗುರುತಿಸಿರುವ ಕಟ್ಟಡಗಳು ಬಳಕೆಗೆ ಸಿದ್ಧವಾಗಿರಬೇಕು. ಅಲ್ಲಿ ಕುಡಿಯುವ ನೀರು, ಶೌಚಾಲಯಗಳು ಮೂಲ ಸೌಕರ್ಯಗಳ ವ್ಯವಸ್ಥೆ ಸಮರ್ಪಕವಾಗಿ ಇರಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 13 , ಧಾರವಾಡ ತಾಲೂಕಿನಲ್ಲಿ 08 , ನವಲಗುಂದ ತಾಲೂಕಿನ 26 ಹಳ್ಳಿಗಳು ಪ್ರವಾಹಕ್ಕೀಡಾಗಬಹುದು ಎಂದು ಅಂದಾಜಿಸಲಾಗಿದೆ. ಈ ಪ್ರದೇಶಗಳಲ್ಲಿ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಆಯಾ ತಹಶೀಲ್ದಾರರು ಸಭೆಯಲ್ಲಿ ವಿವರಿಸಿದರು.
ಬಳಿಕ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಮಾತನಾಡಿ, ಅವಳಿ ನಗರದಲ್ಲಿ 14 ಕೆರೆಗಳನ್ನು ಪರಿಶೀಲಿಸಲಾಗಿದೆ. ಸುಮಾರು 43 ಸ್ಥಳಗಳು ತೊಂದರೆಗೀಡಾಗುವ ಸಂಭವವವಿದ್ದು, ಅದರಲ್ಲಿ 18 ಪ್ರದೇಶಗಳಲ್ಲಿ ಹೆಚ್ಚು ಬಾಧಿತವಾಗುವ ಸಾಧ್ಯತೆ ಇದೆ. ತಗ್ಗು ಪ್ರದೇಶದ ಜನರ ಸ್ಥಳಾಂತರಕ್ಕೆ 17 ಕಲ್ಯಾಣ ಮಂಟಪಗಳನ್ನು ಗುರುತಿಸಿ ಅವುಗಳ ಕೀಲಿಗಳು ಈಗಾಗಲೇ ಪಾಲಿಕೆಯ ಸಿಬ್ಬಂದಿ ಬಳಿ ಇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಇದುವರೆಗೆ 37 ಮನೆಗಳು ಭಾಗಶಃ ಹಾನಿಗೀಡಾಗಿವೆ. ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ಪರಿಹಾರ ನೀಡಲು ತಹಶೀಲ್ದಾರರಿಗೆ ಸೂಚಿಸಲಾಗಿದೆ. ನವಲಗುಂದ ತಾಲೂಕಿನ ಬೆಳೆಹಾನಿಯನ್ನು ಸಮೀಕ್ಷೆ ಮಾಡಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಜಿ.ಪಂ.ಸಿಇಒ ಡಾ.ಬಿ.ಸಿ.ಸತೀಶ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.