ಧಾರವಾಡ: ಜಿಲ್ಲೆಯಲ್ಲಿ ವಾಡಿಕೆ ಮಳೆಗೆ ಹೋಲಿಸಿದರೆ 177 ಮಿಲಿ ಮೀಟರ್ ಬರಬೇಕಿದೆ. ಸದ್ಯಕ್ಕೆ 172 ಮಿಲಿ ಮೀಟರ್ ಮಳೆಯಾಗಿದೆ. ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಶೇ.3 ರಷ್ಟು ಕಡಿಮೆ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನೂ ಮಳೆಯಾಗುತ್ತಿದೆ. ನಮ್ಮಲ್ಲಿ ಅತಿವೃಷ್ಠಿ ಇಲ್ಲ. ಕಡಿಮೆ ಮಳೆಯೂ ಇಲ್ಲ. 3 ದಿನದಲ್ಲಿ 37 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈ ಮಳೆಯ ಅವಧಿಯಲ್ಲಿ ಜಿಲ್ಲೆಯಲ್ಲಿ 157 ಮನೆಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ಎನ್‌ಡಿಆರ್‌ಎಫ್ ಪ್ರಕಾರ ಪರಿಹಾರ ಕೊಡಲಾರಂಭಿಸಿದ್ದೇವೆ. ಕೆಲವೊಂದಿಷ್ಟು ಮನೆಗಳ ಮಹಜರ್ ಮಾಡಿ ಪರಿಹಾರವನ್ನೂ ಕೊಟ್ಟಿದ್ದೇವೆ. ಮಾನವ, ಪ್ರಾಣಿ ಹಾನಿ ಸೇರಿದಂತೆ ಅಪಾಯಕಾರಿ ಘಟನೆ ನಮ್ಮ ಜಿಲ್ಲೆಯಲ್ಲಿ ಆಗಿಲ್ಲ. ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ, ನೀರಸಾಗರದಲ್ಲಿನ ನೀರಿನ ಪ್ರಮಾಣದ ಬಗ್ಗೆ ಗಮನಹರಿಸಿದ್ದೇವೆ ಎಂದರು.
ಎಚ್ಚರ ವಹಿಸಲು ಸೂಚನೆ: ಸಾಕಷ್ಟು ಜಲಾಶಯಮಟ್ಟ ಖಾಲಿ ಇದೆ. ಅಪಾಯದ ಮಟ್ಟವನ್ನು ಯಾವ ಹಳ್ಳವೂ ಮೀರಿಲ್ಲ. ಜಿಲ್ಲೆಯ ಎಲ್ಲೆಲ್ಲಿ ಹೆಚ್ಚು ಮಳೆಯಾಗುತ್ತಿದೆಯೋ ಅಲ್ಲೆಲ್ಲ ನಮ್ಮ ಅಧಿಕಾರಿಗಳಿಗೆ ಎಚ್ಚರ ವಹಿಸಲು ಹೇಳಿದ್ದೇವೆ. ಜಿಲ್ಲೆಯಲ್ಲಿ ಎಲ್ಲಿ ಶಾಲೆಗಳು ಸೋರುತ್ತಿವೆಯೋ ಅಲ್ಲಿ ಸಮುದಾಯ ಭವನದಲ್ಲಿ ವ್ಯವಸ್ಥೆ ಮಾಡಿಕೊಳ್ಳಲು ಹೇಳಿದ್ದೇವೆ. ಬುಧವಾರ ಉಸ್ತುವಾರಿ ಸಚಿವರೂ ತುರ್ತು ಸಭೆ ಕರೆದಿದ್ದಾರೆ.
ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ: ಸೋರುತ್ತಿರುವ ಶಾಲೆಗಳಿಗೆ ಜಿಲ್ಲಾಡಳಿತದಿಂದ 2 ಲಕ್ಷದವರೆಗೆ ಸಹಾಯ ಮಾಡಲು ಸಿದ್ಧರಿದ್ದೇವೆ. ಈಗಾಗಲೇ ಪಿಡಬ್ಲುಡಿ ಲೆಟರ್ ಕೂಡ ಬರೆದಿದ್ದೇವೆ. ಮುಂದಿನ ಐದು ದಿನಗಳ ಕಾಲ ನಮ್ಮ ಜಿಲ್ಲೆಗೆ ಯೆಲ್ಲೋ ಅಲರ್ಟ್ ಇದೆ. ಸದ್ಯಕ್ಕೆ ಎನ್‌ಡಿಆರ್‌ಎಫ್ ನಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಕೊಡುತ್ತಿದ್ದೇವೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಇದುವರೆಗೂ ಯಾರೂ ಕರೆ ಮಾಡಿಲ್ಲ: ಧಾರವಾಡ ಜಿಲ್ಲೆಯಿಂದ ಅಮರನಾಥಕ್ಕೆ ಯಾರೂ ಹೋಗಿಲ್ಲ, ಸಹಾಯವಾಣಿ ಸಹ ಆರಂಭಿಸಿದ್ದೇವೆ. ಇದುವರೆಗೂ ಯಾರೂ ಕರೆ ಮಾಡಿಲ್ಲ. ಹಾಗೆನಿದ್ದರೂ ಕಾಲ್ ಮಾಡಿದರೆ ಅವರ ರಕ್ಷಣೆಗೆ ಸರ್ಕಾರ ಹಾಗೂ ನಾವು ಮುಂದಾಗುತ್ತೇವೆ ಎಂದು ಹೇಳಿದರು.
ಓದಿ: ಚಿಕ್ಕಮಗಳೂರು: ಮಹಾಮಳೆಯ ಆರ್ಭಟಕ್ಕೆ ತತ್ತರಿಸಿದ ಮಲೆನಾಡು..ಆತಂಕದಲ್ಲಿ ಜನಜೀವನ