ಹುಬ್ಬಳ್ಳಿ: ಕೋವಿಡ್ ಎರಡನೇ ಅಲೆ ದಿನೇ ದಿನೆ ಉಲ್ಬಣಗೊಳ್ಳುತ್ತಿರುವುದರಿಂದ ಸೋಂಕು ತಡೆಗೆ ರಾಜ್ಯದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಪರಿಣಾಮ ರಿಕ್ಷಾ ಮತ್ತು ಕ್ಯಾಬ್ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೋವಿಡ್ ಮೊದಲ ಅಲೆಯ ವೇಳೆ ಲಾಕ್ಡೌನ್ ಜಾರಿ ಮಾಡಿದ್ದ ಪರಿಣಾಮ ಆಟೋ ಮತ್ತು ಕ್ಯಾಬ್ ಚಾಲಕರು ತೀವ್ರ ತೊಂದರೆ ಅನುಭವಿಸಿದ್ದರು. ಎರಡು ತಿಂಗಳು ಕೆಲಸ ಕಾರ್ಯವಿಲ್ಲದೆ ಜೀವನ ನಿರ್ವಹಣೆಗೆ ಕಷ್ಟ ಅನುಭವಿಸಿದ್ದರು. ಎಲ್ಲಾ ಸುಧಾರಿಸುತ್ತಿದೆ ಎನ್ನುವಷ್ಟರಲ್ಲಿ ಎರಡನೇ ಅಲೆ ವಕ್ಕರಿಸಿ ಅವಾಂತರ ಸೃಷ್ಟಿಸಿದೆ.
ಬಡ ಮತ್ತು ಮಧ್ಯಮ ವರ್ಗದಲ್ಲಿರುವ ರಿಕ್ಷಾ, ಕ್ಯಾಬ್ ಚಾಲಕರಿಗೆ ಇದೀಗ ದಿಕ್ಕೇ ತೋಚದಂತಾಗಿದ್ದಾರೆ. ಕಳೆದ ವರ್ಷ ಮುಖ್ಯಮಂತ್ರಿಗಳು ರಿಕ್ಷಾ ಹಾಗೂ ಕ್ಯಾಬ್ ಚಾಲಕರಿಗೆ 5,000 ರೂ. ಘೋಷಣೆ ಮಾಡಿದ್ದರೂ ಕೆಲವರಿಗೆ ಮಾತ್ರ ಆ ಪರಿಹಾರ ಸಿಕ್ಕಿದೆ. ಈ ಬಾರಿ ಕಳೆದ ಬಾರಿಗಿಂತಲೂ ರಿಕ್ಷಾ ಚಾಲಕರ ಬದುಕು ದುಸ್ತರವಾಗಿದ್ದು, ಸರ್ಕಾರ ನೆರವು ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಪ್ರತಿದಿನ ಆಟೋ, ಕ್ಯಾಬ್ ಓಡಿಸಿ ಸಾಲ ತೀರಿಸುವುದರ ಜತೆಗೆ ಜೀವನ ನಿರ್ವಹಣೆ ಮಾಡುತ್ತಿದ್ದವರಿಗೆ ಕೊರೊನಾ ಎರಡನೇ ಅಲೆ ಗಾಯದ ಮೇಲೆ ಬರೆ ಎಳೆದ ಪರಿಸ್ಥಿತಿ ಸೃಷ್ಟಿಸಿದೆ. ಅದರಲ್ಲೂ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸುಮಾರು ಐದಾರು ಸಾವಿರ ಆಟೋಗಳಿವೆ. ರಾಜ್ಯ ಸರ್ಕಾರ ಬೆಳಗ್ಗೆ 6ರಿಂದ 12 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿದೆ. ಆದ್ರೆ ಆ ವೇಳೆ ಆಟೋ ಓಡಿಸಲು ಪೊಲೀಸರು ಬಿಡುತ್ತಿಲ್ಲ. ಆಟೋ ಸೀಜ್ ಮಾಡಿ ದಂಡ ಹಾಕುತ್ತಿದ್ದಾರೆಂದು ಆಟೋ ಚಾಲಕರು ತಿಳಿಸಿದ್ದಾರೆ. ಹೀಗಾಗಿ ಜೀವನ ನಡೆಸುವುದು ಹೇಗೆ ಎಂದು ಆಟೋ ಚಾಲಕರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: ಮಂಗಳೂರು: ಕೋವಿಡ್ ಎರಡನೇ ಅಲೆಗೆ ಹೈರಾಣಾದ ರಿಕ್ಷಾ, ಕ್ಯಾಬ್ ಚಾಲಕರು
ಒಟ್ಟಿನಲ್ಲಿ ಆಟೋ ಹಾಗೂ ಕ್ಯಾಬ್ ಚಾಲಕರು ಕೊರೊನಾ ಕರ್ಫ್ಯೂ ವೇಳೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಕಳೆದ ಬಾರಿ ಘೊಷಣೆ ಮಾಡಿದ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡುವ ಮೂಲಕ ಚಾಲಕರ ಹಿತ ಕಾಪಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.