ಧಾರವಾಡ: ಮಾಜಿ ಸಚಿವ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಳೆಯ ಸಾಕ್ಷ್ಯನಾಶದ ಕೇಸ್ ಬಿ ರಿಪೋರ್ಟ್ ಮರು ತನಿಖೆ ಮಾಡುವಂತೆ ಜನಪ್ರತಿನಿಧಿಗಳ ಕೋರ್ಟ್ ಆದೇಶಿಸಿದೆ.
ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ವಿನಯ ಕುಲಕರ್ಣಿ ಹೊರಗಿದ್ದಾರೆ. ಆದರೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಕೋರ್ಟ್ ನಿರ್ಬಂಧ ವಿಧಿಸಿದೆ. ಜಿಲ್ಲಾ ಪ್ರವೇಶಕ್ಕೆ ಕಸರತ್ತು ನಡೆಸಿದ ಬೆನ್ನಲ್ಲೇ ಇದೀಗ ವಿನಯ್ ಕುಲಕರ್ಣಿ ಅವರಿಗೆ ಮತ್ತೊಂದು ಹಿನ್ನಡೆ ಆಗಿದೆ. ಧಾರವಾಡ ಉಪನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ದೂರುದಾರ ಗುರುನಾಥಗೌಡ ಮೇಲೆ ರಾಜಿ ಒತ್ತಡ ಹಾಕಿ ಸಾಕ್ಷ್ಯನಾಶ ಮಾಡುತ್ತಿದ್ದಾರೆ ಎಂಬ ಆರೋಪದ ಆಧಾರದ ಮೇಲೆ ದೂರು ದಾಖಲಾಗಿದೆ. ಈ ಸಂದರ್ಭದಲ್ಲಿ ಕೆಲ ಪೊಲೀಸ್ ಅಧಿಕಾರಿಗಳ ಮೂಲಕ ರಾಜಿ ಸಂಧಾನ ಯತ್ನ ನಡೆದಿತ್ತು ಎನ್ನಲಾಗಿದೆ.
ಈ ಬಗ್ಗೆ ಆಡಿಯೋ, ವಿಡಿಯೋ ಸಾಕ್ಷ್ಯ ಕಲೆ ಹಾಕಿದ್ದ ಗುರುನಾಥಗೌಡ ಅದನ್ನೇ ಮುಂದಿಟ್ಟುಕೊಂಡು ಕೋರ್ಟ್ ಮೊರೆ ಹೋಗಿದ್ದರು. ಅದರ ಬಗ್ಗೆ ಎಫ್‌ಐಆರ್ ದಾಖಲಿಸಲು ಕೋರ್ಟ್ ಸೂಚಿಸಿತ್ತು. ವಿನಯ್ ಕುಲಕರ್ಣಿ, ಡಿವೈಎಸ್ಪಿ ಸುಲ್ಪಿ ಸೇರಿ ಅನೇಕ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದರ ಬಗ್ಗೆ ತನಿಖೆ ನಡೆಸಿದ್ದ ಡಿಸಿಪಿ ಗುನಾರೆ ನೇತೃತ್ವದ ತಂಡದಿಂದ ಗುರುನಾಥ ಗೌಡ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಬಿ ರಿಪೋರ್ಟ್ ಸಲ್ಲಿಕೆಯಾಗಿತ್ತು.
ಈ ಬಿ ರಿಪೋರ್ಟ್ ವಿರುದ್ಧ ಪುನಃ ಮೃತ ಯೋಗೀಶಗೌಡ ಸಹೋದರ ಗುರುನಾಥ ಗೌಡ ಕೋರ್ಟ್ ಮೊರೆ ಹೋಗಿದ್ದರು. ಗುರುನಾಥಗೌಡ ಅರ್ಜಿ ವಿಚಾರಣೆ ನಡೆಸಿ ಪುನಃ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ಕೋರ್ಟ್ ಆದೇಶಿಸಿದೆ. ಈ ಬಗ್ಗೆ ಯೋಗೇಶಗೌಡ ಹತ್ಯೆಗೆ ನ್ಯಾಯಕೊಡಿಸಲು ಹೋರಾಟ ಮಾಡುವ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಮಾತನಾಡಿದ್ದು, ಈ ಕೇಸ್ ಸಹ ಸಿಬಿಐಗೆ ವಹಿಸಲು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸಿಬಿಐಗೆ ಕೊಡದೇ ಹೋದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ಸಂಬಂಧ ಮಾತನಾಡಿರುವ ಗುರುನಾಥ ಗೌಡ, ಕೋರ್ಟ್ನಲ್ಲಿ ಸೋದರನ ಕೊಲೆ ಕೇಸ್ನ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ಸಾಕ್ಷ್ಯ ನುಡಿಯದಂತೆ ನಮ್ಮ ಮೇಲೆ ಒತ್ತಡ ಹಾಕಲಾಗಿತ್ತು. ಈ ಮೂಲಕ ಸಾಕ್ಷ್ಯನಾಶಕ್ಕೆ ಯತ್ನಿಸಲಾಗಿತ್ತು. ಅದರ ವಿರುದ್ಧ ನಾನು ನ್ಯಾಯಾಲಯಕ್ಕೆ ಹೋಗಿದ್ದೆ. ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶವಾಗಿತ್ತು. ಆದರೆ, ಆಗ ಕಾಂಗ್ರೆಸ್ ಸರ್ಕಾರವೇ ಇತ್ತು. ಹೀಗಾಗಿ ಆ ಕೇಸ್ ನಲ್ಲಿಯೂ ಬಿ ರಿಪೋರ್ಟ್ ಹಾಕಿದ್ದರು. ಇದನ್ನು ಪ್ರಶ್ನಿಸಿ ನಾನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹೋಗಿದ್ದೆವು. ಆಡಿಯೋ, ವಿಡಿಯೋ ಸಾಕ್ಷಿಗಳು ನಮ್ಮ ಬಳಿ ಇದ್ದವು. ಈ ಬಗ್ಗೆ ನ್ಯಾಯಾಲಯಕ್ಕೆ ನಮ್ಮ ವಕೀಲರು ತಿಳಿಸಿದ್ದರು. ಈ ಬಗ್ಗೆ ವಿಚಾರಣೆಗೆ ಕೋರ್ಟ್ ಮರು ತನಿಖೆಗೆ ಆದೇಶ ನೀಡಿದೆ ಎಂದರು.
ಈಗಲೂ ಕಾಂಗ್ರೆಸ್ ಸರ್ಕಾರವೇ ಇದೆ. ಆಗ ಬಿ ರಿಪೋರ್ಟ್ ತಪ್ಪು ಹಾಕಿದ್ದರು. ಹೀಗಾಗಿ ಇದನ್ನೂ ಸಹ ಸಿಬಿಐಗೆ ವಹಿಸಬೇಕು. ಆಗ ಸಚಿವರಾಗಿದ್ದ ವಿನಯ್ ಕುಲಕರ್ಣಿ ಒತ್ತಡ ಹಾಕಿಸಿದ್ದರು. ಡಿಎಸ್ಪಿಗಳಾದ ಚಂದ್ರಶೇಖರ, ತುಳಜಪ್ಪ ಸುಲ್ಪಿ ಸಾಕ್ಷ್ಯ ನುಡಿಯದಂತೆ ಒತ್ತಡ ಹಾಕಿದ್ದರು ಎಂದು ಆರೋಪಿಸಿದರು. ಯೋಗೀಶಗೌಡ ಕೇಸ್ ವಿಚಾರಣೆಯ ಸಾಕ್ಷಿಗಳು ಇದ್ದವು. ಆ ಸಾಕ್ಷಿಗಳಾದ ನಮ್ಮ ಮೇಲೆ ಒತ್ತಡ ಹಾಕಿದ್ದರು. ಸುಲ್ಫಿಯವರು ಎನ್‌ಕೌಂಟರ್ ಮಾಡುವ ಬೆದರಿಕೆ ಸಹ ಹಾಕಿದ್ದರು. ಈ ಬಗ್ಗೆ ನಾನು ಆಡಿಯೋ, ವಿಡಿಯೋ ಕಲೆಕ್ಟ್ ಮಾಡಿದ್ದೆ. ಅದನ್ನೇ ನ್ಯಾಯಾಲಯಕ್ಕೆ ಸಲ್ಲಿಸಿದ್ದೆವು ಎಂದರು.
ಓದಿ: ಧಾರವಾಡ ಪ್ರವೇಶಕ್ಕೆ ಅವಕಾಶ ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ವಜಾ