ಹುಬ್ಬಳ್ಳಿ: ದೇವರು ವರ ಕೊಟ್ರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿತ್ತು ಹತ್ತಿ ಬೆಳೆದ ರೈತರ ಪರಿಸ್ಥಿತಿ. ಭೀಕರ ಮಳೆಯ ನಡುವೆಯೂ ಕಷ್ಟಪಟ್ಟು ಹತ್ತಿ ಬೆಳೆದ ರೈತರು ಹತ್ತಿ ಮಾರಾಟಕ್ಕೆ ಹೆಣಗಾಡುತ್ತಿದ್ದರು. ಈ ಕುರಿತು ಈಟಿವಿ ಭಾರತ ವಿಸ್ತೃತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಕೊನೆಗೂ ಹತ್ತಿ ಖರೀದಿ ಕೇಂದ್ರ ತೆರೆದಿದೆ.
ಅಣ್ಣಿಗೇರಿಯಲ್ಲಿ ಇಂದು ಭಾರತೀಯ ಹತ್ತಿ ನಿಗಮದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ಹತ್ತಿ ಖರೀದಿ ಕೇಂದ್ರವನ್ನು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಉದ್ಘಾಟಿಸಿದರು.
ಅಣ್ಣಿಗೇರಿಯಲ್ಲಿ ಮೂರು, ಹುಬ್ಬಳ್ಳಿಯಲ್ಲಿ ಎರಡು, ಧಾರವಾಡದಲ್ಲಿ ಎರಡು ಹತ್ತಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಖರೀದಿ ಕೇಂದ್ರಗಳಿಲ್ಲದೆ ಹತ್ತಿ ಮಾರಾಟ ಮಾಡಲಾಗದೆ ರೈತರು ಸಂಕಷ್ಟ ಎದುರಿಸುವಂತಾಗಿತ್ತು. ಸರ್ಕಾರ ಹತ್ತಿ ಖರೀದಿ ಕೇಂದ್ರ ತೆರೆಯುವಂತೆ ಈ ಹಿಂದೆ ಆದೇಶ ಮಾಡಿತ್ತು. ಆದರೆ ಅಧಿಕಾರಿಗಳು ಮಾತ್ರ ಹತ್ತಿ ಖರೀದಿ ಕೇಂದ್ರ ಆರಂಭ ಮಾಡಿರಲಿಲ್ಲ. ಇದರಿಂದ ರೈತರಿಗೆ ಅನಾನುಕೂಲವಾಗಿತ್ತು.
ಈ ಕುರಿತು ಈಟಿವಿ ಭಾರತ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಈಗ ಧಾರವಾಡ ಜಿಲ್ಲೆಯಲ್ಲಿ 2020-21ನೇ ಸಾಲಿನ 48 ಹತ್ತಿ ಖರೀದಿ ಕೇಂದ್ರಗಳನ್ನು ತೆರೆಯಲು ಭಾರತೀಯ ಹತ್ತಿ ನಿಗಮ ಅನುಮತಿ ಕೊಟ್ಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಇದರ ಮೊದಲ ಭಾಗವಾಗಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 7 ಹತ್ತಿ ಕೇಂದ್ರಗಳನ್ನು ತೆರೆಯಲಾಗಿದೆ.