ಧಾರವಾಡ: ಜಿಲ್ಲೆಯಾದ್ಯಂತ ಕೊರೊನಾ ಹೈ ಅಲರ್ಟ್ ಕಾಣುತ್ತಿದೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಕಡೆಗಳಿಂದ ಬರುವ ಜನರ ದೇಹದ ಉಷ್ಣಾಂಶದ ತಪಾಸಣೆ ನಡೆಸಲಾಗುತ್ತಿದೆ.
ಜಿಲ್ಲೆಗೆ ಆಗಮಿಸುವ ಎಲ್ಲಾ ವಾಹನ ಮತ್ತು ಜನರ ತಪಾಸಣೆಯನ್ನು ಆರೋಗ್ಯ ಇಲಾಖೆ ತಪಾಸಣೆ ನಡೆಸುತ್ತಿದೆ. ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವ ಜನರ ಮೇಲೆ ನಿಗಾ ವಹಿಸಲಾಗಿದೆ. ಧಾರವಾಡ ಜಿಲ್ಲೆಗೆ ಕೆಲಗೇರಿ, ನರೇಂದ್ರ ಕ್ರಾಸ್, ನುಗ್ಗಿಕೇರಿ ಕಡೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ತಪಾಸಣೆಗೆ ಆರೋಗ್ಯ ಇಲಾಖೆ ಮುಂದಾಗಿದೆ.
ಧಾರವಾಡದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಹಿನ್ನೆಲೆ ವ್ಯಕ್ತಿಯ ಮನೆಯ ಸುತ್ತ ಸ್ಯಾನಿಟೈಜರ್ ಸಿಂಪಡನೆ ಕಾರ್ಯ ನಡೆಸಲಾಗುತ್ತಿದೆ. ವ್ಯಕ್ತಿಯ ಮನೆ ಸುತ್ತ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಸ್ಯಾನಿಟೈಜರ್ ಸಿಂಪಡಿಸಲಾಗುತ್ತಿದೆ.
ಧಾರವಾಡಕ್ಕೆ ಬರುವ ಮಹಾರಾಷ್ಟ್ರ, ಗೋವಾ ಬಸ್ಗಳು ಬಂದ್:
ಧಾರವಾಡ ಜಿಲ್ಲೆಗೆ ಆಗಮಿಸುವ ಹಾಗೂ ನಿರ್ಗಮಿಸುವ ಮಹಾರಾಷ್ಟ್ರ ಗೋವಾ ರಾಜ್ಯದ ಬಸ್ ಗಳು ನಿಷೇಧಿಸಲಾಗಿದೆ.. ಮುಂಜಾಗ್ರತ ಕ್ರಮವಾಗಿ ಬಸ್ ನಿಷೇಧಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುವ ಬಿಆರ್ ಟಿಎಸ್ ಚಿಗರಿ ಬಸ್ ಹಾಗೂ ಖಾಸಗಿ ಬಸ್ ಗಳನ್ನು ನಿಷೇಧಿಸಲಾಗಿದೆ. ಇಂದಿನಿಂದ ಮಾರ್ಚ್ 31 ರವರೆಗೂ ನಿಷೇಧಿಸಿ ಡಿಸಿ ಅವರು ಆದೇಶ ಹೊರಡಿಸಿದ್ದಾರೆ.
ಕೊರೊನಾ ವೈರಸ್ ಹೊಡೆದೋಡಿಸು ಎಂದು ದೇವರಿಗೆ ಮೊರೆ:
ದೇವರಿಗೆ ಕೊರೊನಾ ವೈರಸ್ ಹೊಡೆದು ಓಡಿಸು ಎಂದು ನಾಮಫಲಕ ಇಟ್ಟು ಪೂಜೆ ಸಲ್ಲಿಸಲಾಗಿದೆ. ಧಾರವಾಡದ ವಿವೇಕಾನಂದ ನಗರದ ವಿದ್ಯಾಗಿರಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ಮಹಾದೇವರಿಗೆ ವಿಶೇಷ ರೀತಿಯಲ್ಲಿ ಸಂಕಲ್ಪ ಪೂಜೆ ಮಾಡಿ ಕೊರೊನಾ ಹೋಗಲಾಡಿಸಲು ಪೂಜೆ ಸಲ್ಲಿಸಲಾಗಿದೆ.