ಹುಬ್ಬಳ್ಳಿ : ಜಿಲ್ಲಾದ್ಯಂತ ಹಾಸ್ಟೆಲ್‌ಗಳನ್ನು ತೆರೆದು ದಾಖಲಾತಿಗೆ ಮುಂದಾಗಿದ್ದರೂ ಸಹ ಯಾವೊಬ್ಬ ವಿದ್ಯಾರ್ಥಿಗಳು ವಸತಿ ನಿಲಯಗಳತ್ತ ಮುಖ ಮಾಡಿಲ್ಲ. ಇದು ಹಾಸ್ಟೆಲ್ ಆಡಳಿತ ಮಂಡಳಿಗೆ ಚಿಂತೆಯಾಗಿದೆ.
ಕೋವಿಡ್-19 ಕಡಿಮೆಯಾಗುತ್ತಿದ್ದಂತೆ, ಪದವಿ, ಸ್ನಾತಕೋತ್ತರ, ವೃತ್ತಿಪರ ತಾಂತ್ರಿಕ ಕೋರ್ಸ್‌ಗಳ ಅಂತಿಮ ವಿದ್ಯಾರ್ಥಿಗಳಿಗೆ ನ.17 ರಿಂದ ತರಗತಿಗಳನ್ನು ಸರ್ಕಾರ ಆರಂಭಿಸಿದೆ.
ಇದಕ್ಕೆ ಇಲಾಖೆಯು ಪೂರಕವಾಗಿ ಅಂದಿನಿಂದಲೇ ಹಾಸ್ಟೆಲ್‌ಗಳ ಪುನಾರಂಭ ಮಾಡಿದೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳಿಸಲಾಗಿದೆ.
ಮೂರು ಇಲಾಖೆಯಿಂದ ಜಿಲ್ಲೆಯಲ್ಲಿ ಸುಮಾರು 3000 ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ 65 ಹಾಸ್ಟೆಲ್‌ಗಳನ್ನು ಸಿದ್ಧಪಡಿಸಲಾಗಿದೆ. ಆದರೆ, ಕಳೆದ 10 ದಿನಗಳಿಂದ ಮೂರು ಇಲಾಖೆಯ ಹಾಸ್ಟೆಲ್‌ಗಳಲ್ಲಿ ಶೇ.20ರಷ್ಟು ವಿದ್ಯಾರ್ಥಿಗಳು ಸಹ ದಾಖಲಾಗಿಲ್ಲ. ಹೀಗಾಗಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲಾ ಸಿದ್ಧತೆ ನಡೆಸಿ ದಾಖಲಾಗುವಂತೆ ಮನವಿ ಮಾಡಲಾಗುತ್ತಿದೆ.
ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಕೋವಿಡ್-19 ಕುರಿತ ಆತಂಕ ಕಡಿಮೆಯಾಗಿಲ್ಲ. ಹಾಸ್ಟೆಲ್ಗೆ ದಾಖಲಾಗುವ 72 ಗಂಟೆ ಮುನ್ನ ಕೋವಿಡ್-19 ಪರೀಕ್ಷೆಗೊಳಗಾಗಿ ನೆಗೆಟಿವ್ ವರದಿ ತರಬೇಕು ಎನ್ನುವ ನಿಯಮದಿಂದ ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.