ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಠಾಣೆಯನ್ನು ಮಹಾನಗರ ಪಾಲಿಕೆ ಸೀಲ್ ಡೌನ್ ಮಾಡಿದ್ದು, ಠಾಣೆಗೆ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಠಾಣೆಯನ್ನು ಸಿದ್ದಾರೂಢಮಠದ ಆವರಣದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಸಾರ್ವಜನಿಕರು ಯಾವುದೇ ಕೆಲಸ ಕಾರ್ಯಗಳಿದ್ದರೆ, ಸಮಸ್ಯೆಗಳಿದ್ದರೆ ಸಿದ್ದಾರೂಢಮಠದ ಆವರಣದಲ್ಲಿರುವ ಔಟ್ ಪೋಸ್ಟ್ ಪೊಲೀಸ್ ಠಾಣೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಭೇಟಿ ನೀಡಲು ಮನವಿ ಮಾಡಲಾಗಿದೆ.