ಹುಬ್ಬಳ್ಳಿ: ಲಾಕ್ಡೌನ್ನಿಂದಾಗಿ ಎಲ್ಲಾ ಉದ್ಯಮ ಕ್ಷೇತ್ರಗಳು ತತ್ತರಿಸಿ ಹೋಗಿವೆ. ರೈತರು ಕೂಡಾ ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗದೆ ಆತಂಕಕ್ಕೆ ಒಳಗಾಗಿದ್ದಾರೆ.
ಕೊರೊನಾ ವೈರಸ್ ಹಬ್ಬುವುದನ್ನು ತಪ್ಪಿಸಲು ಲಾಕ್ಡೌನ್ ವಿಧಿಸಲಾಗಿದ್ದು, ದೇಶದ ಎಲ್ಲ ಚಟುವಟಿಕೆಗಳು ಸ್ತಬ್ಧವಾಗಿವೆ. ಬಹುತೇಕ ವಲಯಗಳು ನಷ್ಟ ಅನುಭವಿಸುತ್ತಿವೆ. ಜಿಲ್ಲೆಯಲ್ಲಿ ರೈತರು ಬೆಳೆದ ಹತ್ತಿ ಮಾರಾಟಕ್ಕೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಣ್ಣೀರು ಹಾಕುತ್ತಿದ್ದಾರೆ. ಕೆಲವು ರೈತರು ಹತ್ತಿ ಬಿಡಿಸಿ ಮನೆಯಲ್ಲಿ ತಂದಿಟ್ಟುಕೊಂಡಿದ್ದು, ಲಾಕ್ಡೌನ್ ಮುಗಿಯುತ್ತೋ ಇಲ್ಲವೋ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚುಮಾಡಿ ಬೆಳೆದ ಫಸಲಿಗೆ ಸರಿಯಾದ ಬೆಲೆ ಮತ್ತು ಮಾರುಕಟ್ಟೆ ಸಿಗದಿರುವುದು ರೈತರಲ್ಲಿ ಆತಂಕ ಉಂಟುಮಾಡಿದೆ.
ಕಳೆದ ಬಾರಿ ಕೇಂದ್ರ ಸರ್ಕಾರ ಹತ್ತಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ಪ್ರತಿ ಕ್ವಿಂಟಲ್ಗೆ 5,000 ರಿಂದ 6,000 ರೂ. ನಿಗದಿ ಮಾಡಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ 2,000 ರಿಂದ 3,000 ರೂ. ಬೆಲೆಗೆ ದಲ್ಲಾಳಿಗಳು ಕೇಳುತ್ತಿದ್ದಾರೆ. ಶೀಘ್ರವೇ ಸರ್ಕಾರ ಎಚ್ಚೆತ್ತುಕೊಂಡು ಹತ್ತಿಗೆ ಬೆಂಬಲ ಬೆಲೆ ನೀಡಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಬೆಳೆಗಾರರ ಮನವಿ.