ಧಾರವಾಡ/ಹುಬ್ಬಳ್ಳಿ: ಅವಳಿ ನಗರದಲ್ಲಿ ಪ್ರತಿದಿನ ತ್ರಿಶತಕ ಬಾರಿಸುತ್ತಿದ್ದ ಕೊರೊನಾ ಸೋಂಕಿನ ಸಂಖ್ಯೆ ಇಳಿಮುಖವಾಗುತ್ತಿದ್ದು, ಜನ ನಿಟ್ಟುಸಿರು ಬಿಡುವಂತಾಗಿದೆ.
ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕಳೆದ 8-10 ದಿನಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಸೆಪ್ಟಂಬರ್ ತಿಂಗಳ ಮೊದಲ 20 ದಿನ ಸೋಂಕಿತರ ಸಂಖ್ಯೆ ದ್ವಿಶತಕ-ತ್ರಿಶತಕದವರೆಗೂ ತಲುಪಿರುವುದು ಇಲಾಖೆಯ ಬಿಡುಗಡೆ ಮಾಡಿದ ವರದಿಯಲ್ಲಿದೆ. ಆದರೆ ಕೇವಲ ಹತ್ತು ದಿನದಲ್ಲಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಕೊರೊನಾ ಇಳಿಕೆಯ ಕುರಿತು ಸೆಪ್ಟಂಬರ್ 19ರಿಂದ ಅಕ್ಟೋಬರ್ 5 ರವರೆಗಿನ ಕೊರೊನಾ ಟೆಸ್ಟಿಂಗ್ ಸಂಖ್ಯೆಗಳು ಸ್ಪಷ್ಟಪಡಿಸುತ್ತಿವೆ.
ಈ ಅವಧಿಯಲ್ಲಿ 59 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಟೆಸ್ಟಿಂಗ್ ನಡೆಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 66 ಸ್ವ್ಯಾಬ್ ಸಂಗ್ರಹ ಕೇಂದ್ರಗಳಿವೆ. ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ 28 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕೊರೊನಾ ಟೆಸ್ಟಿಂಗ್ ಪ್ರಾರಂಭವಾದಾಗಿನಿಂದ ಸೆಪ್ಟಂಬರ್ 19 ರವರೆಗೆ 28 ಕೇಂದ್ರಗಳಲ್ಲಿ 75,213 ಟೆಸ್ಟಿಂಗ್ ಮಾಡಲಾಗಿದೆ. ಸೆಪ್ಟೆಂಬರ್ 20ರಿಂದ ಅಕ್ಟೋಬರ್ 4 ರವರೆಗೆ 13,101 ಜನರ ಟೆಸ್ಟ್ ನಡೆಸಲಾಗಿದೆ. ಈ 17 ದಿನಗಳಲ್ಲಿ ದಿನಕ್ಕೆ ಸರಾಸರಿ 771 ಜನರನ್ನು ಟೆಸ್ಟಿಂಗ್ಗೆ ಒಳಪಡಿಸಲಾಗಿದೆ. 66 ಕೇಂದ್ರಗಳಲ್ಲಿ ಸೆ.19 ರವರೆಗೆ 1,18,998 ಜನ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಅ.4ರವರೆಗೆ 1,42,422 ಜನರು ಕೋವಿಡ್ ತಪಾಸಣೆಗೊಳಗಾಗಿದ್ದಾರೆ. ಈ ಅವಧಿಯಲ್ಲಿ ದಿನಕ್ಕೆ 1378 ಜನರನ್ನು ಇಲಾಖೆಯು ತಪಾಸಣೆ ನಡೆಸಿದೆ.