ಹುಬ್ಬಳ್ಳಿ: ನಾನು ಹಿಂದೂ ಧರ್ಮದವನೇ, ನಾನು ಮತಾಂತರ ಆಗಿಲ್ಲ, ಯಾರನ್ನೂ ಮತಾಂತರ ಮಾಡಿಲ್ಲ ಪದೇ ಪದೆ ನನ್ನ ಮೇಲೆ ಈ ರೀತಿ ಆರೋಪ ಬರ್ತಿದೆ ಎಂದು ಶಿಕ್ಕಲಿಗಾರ ಸಮಾಜ ಮುಖಂಡ ಮದನ್ ಬುಗುಡಿ ಸ್ಪಷ್ಟಪಡಿಸಿದರು.
ನಗರದ ಎಸಿಪಿ ಕಚೇರಿಗೆ ಪ್ರತಿದೂರು ನೀಡಲು ಆಗಮಿಸಿ ಮಾತನಾಡಿದ ಅವರು, ನಾನು ಮತಾಂತರವೇ ಆಗಿಲ್ಲ. ನಾನು ಹಿಂದೂ ಆಗಿ ಬೇರೆ ಧರ್ಮ ಮತಾಂತರ ಹೇಗೆ ಮಾಡಲು ಸಾಧ್ಯ. ಅದರಿಂದ ನನಗೇನು ಲಾಭವಿದೆ. ಮತಾಂತರ ಮಾಡಿದ ಸಾಕ್ಷಿ, ಪುರಾವೆ ಇದ್ದರೆ ನನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.
ನನ್ನ ಬೆಳವಣಿಗೆ ಸಹಿಸದ ನಮ್ಮ ಸಮಾಜದವರಿಂದಲೇ ನನ್ನ ವಿರುದ್ದ ಷಡ್ಯಂತ್ರ ನಡೆಯುತ್ತಿದೆ. ಇದರಿಂದ ನಾನು ACP ಕಚೇರಿಗೆ ತೆರಳಿ ಲಿಖಿತ ದೂರು ನೀಡಲಿದ್ದೇನೆ. ಪದೇ ಪದೆ ಪೊಲೀಸ್ ಠಾಣೆಗೆ ಕರೆಸಿ, ನನ್ನ ಮಾನಸಿಕ ಸ್ಥಿತಿಯನ್ನ ಕುಗ್ಗಿಸಲಾಗುತ್ತಿದೆ ಎಂದರು.
ಬಲವಂತ ಮತಾಂತರ ಆರೋಪ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಶಿಕ್ಕಲಗಾರ ಮುಖಂಡರು, ಹಿಂದೂಪರ ಸಂಘಟನೆಗಳು ಮದನ್ ಹಾಗೂ ಕೆಲವರ ಮೇಲೆ ದೂರು ದಾಖಲಿಸಿದ್ದರು. ಆ ದೂರಿಗೆ ಮದನ್ ಬುಗುಡಿ ಪ್ರತಿದೂರು ನೀಡಿದ್ದಾರೆ.
ಇನ್ನೂ ನಿನ್ನೆ ಸಂಪತ್ ಬಗನಿ ಎಂಬುವವರು ತನ್ನ ಪತ್ನಿ ಬಲವಂತವಾಗಿ ತನ್ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿದ್ದಾಳೆ ಎಂದು ತನ್ನ ಪತ್ನಿ ಭಾರತಿ ವಿರುದ್ಧ ದೂರು ನೀಡಿದ್ದರು.
ಇದಕ್ಕೆ ಸಂಪತ್ ಪತ್ನಿ ಭಾರತಿ ಪ್ರತಿಕ್ರಿಯಿಸಿ, ನನ್ನ ಗಂಡನನ್ನ ಮತಾಂತರ ಆಗುವಂತೆ ಒತ್ತಡ ಮಾಡಿಲ್ಲ. ನಾನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿಲ್ಲ. ವೈಯಕ್ತಿಕ ನಂಬಿಕೆ ಕಾರಣಕ್ಕೆ ನಾನು ಚರ್ಚ್ಗೆ ಹೋಗುತ್ತೇನೆ. ಯಾರನ್ನೂ ಮತಾಂತರಗೊಳ್ಳುವಂತೆ ಪ್ರೇರೇಪಿಸಿಲ್ಲ. ನನ್ನನ್ನ ನನ್ನ ಪತಿ ಬಿಟ್ಟು 13 ವರ್ಷವಾಯಿತು. ನಾನು ನನ್ನ ತವರು ಮನೆಯಲ್ಲೇ ವಾಸ ಮಾಡುತ್ತಿದ್ದೇನೆ. ಮತಾಂತರದ ಪ್ರಶ್ನೆಯೇ ಇಲ್ಲ ಎಂದು ಭಾರತಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮತಾಂತರ ಗಲಾಟೆ: ಕಠಿಣ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ