ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಗುತ್ತಿಗೆದಾರರ ಬಾಕಿ ಹಣವನ್ನು ಪಾವತಿಸಲು ಪಾಲಿಕೆ ಆಯುಕ್ತರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರು, ಪಾಲಿಕೆ ಕಚೇರಿ ಎದುರು ಪೊರಕೆ ಹಿಡಿದು ಪ್ರತಿಭಟಿಸಿದರು.
ಪಾಲಿಕೆಯು ಸುಮಾರು ವರ್ಷಗಳಿಂದ ಗುತ್ತಿಗೆದಾರರಿಗೆ ನೀಡಬೇಕಿರುವ ಬಾಕಿ ಹಣ ಪಾವತಿಸುತ್ತಿಲ್ಲ ಹಾಗೂ ಗುತ್ತಿಗೆದಾರರ ಮೂಗಿಗೆ ತುಪ್ಪ ಸವರಿ ಕೆಲಸ ಮಾಡಿಕೊಂಡಿದೆ. ಮಹಾನಗರದ ಕಾಮಗಾರಿ ಹಿನ್ನಲೆಯಲ್ಲಿ ಪ್ರತಿ ತಿಂಗಳಿಗೆ ಮೂರು ಕೋಟಿ ಹಣವನ್ನು ನೀಡಬೇಕು. ಆದರೆ, ಮಹಾನಗರ ಪಾಲಿಕೆ ಆಯುಕ್ತರು ಗುತ್ತಿಗೆದಾರರಿಗೆ ನೀಡಬೇಕಾದ ಐವತ್ತು ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಶರದ ದೊಡ್ಡಮನಿ, ಅಶೋಕ ಸುರೇಬಾನ, ಆರ್.ಬಿ.ದಾಸಣ್ಣವರ, ನಾಗೇಶ ಹಂಚಿನಮನಿ, ಪರಶುರಾಮ ಕಾಳೆ, ಮೈಲಾರಿ ಹೊಸಮನಿ, ರವಿ ಹನುಮಸಾಗರ, ಮೋಹನಗೌಡರ ಇದ್ದರು.