ಧಾರವಾಡ : ಬಡವರಿಗೆ ಕಡಿಮೆ ದರದಲ್ಲಿ ಉಪಾಹಾರ, ಊಟ ಸಿಗಲಿ ಎಂಬ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನ ಆರಂಭಿಸಿತ್ತು. ಸರ್ಕಾರದ ಆಶಯವೇನೋ ಸರಿಯಿತ್ತು. ಆದರೆ, ಅದಕ್ಕೆ ಬೇಕಾದ ಅನುದಾನದ ವಿಚಾರದಲ್ಲಿ ಯಾವುದೇ ದೂರದೃಷ್ಟಿ ಇಲ್ಲದೇ ಕಾರಣ ಕ್ಯಾಂಟೀನ್ ಆರಂಭಿಸಿರುವ ಹಿನ್ನೆಲೆಯಲ್ಲಿ ಅವು ಬಂದ್ ಆಗೋ ಪರಿಸ್ಥಿತಿಗೆ ಬಂದು ತಲುಪಿವೆ.
ಎಲ್ಲಾ ಜಿಲ್ಲೆಗಳಿಗಿಂತ ಕೊನೆಯದಾಗಿ ಆರಂಭಗೊಂಡ ಅವಳಿ ನಗರಗಳ ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ವಿತರಣೆ ಮಾಡದ ಹಿನ್ನೆಲೆಯಲ್ಲಿ ಇಷ್ಟರಲ್ಲಿಯೇ ಬಂದ್ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಧಾರವಾಡ ನಗರದ ಮಿನಿ ವಿಧಾನಸೌಧದ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಅನುದಾನದ ಕೊರತೆಯಿಂದ ಬಂದ್ ಆಗುವ ಹಂತಕ್ಕೆ ಬಂದು ನಿಂತಿದೆ. ಕ್ಯಾಂಟೀನ್‌ಗಳಿಗೆ ಅನುದಾನದ ಕೊರತೆಯಾಗಿದ್ದರಿಂದ ಇವುಗಳನ್ನು ಮುಚ್ಚಲು ಗುತ್ತಿಗೆದಾರರು ನಿರ್ಧರಿಸಿದ್ದಾರೆ.
ನಗರದ ಎಲ್ಲಾ ಇಂದಿರಾ ಕ್ಯಾಂಟೀನ್ಗಳಿಗೂ ಮಯೂರ ರೆಸಾರ್ಟ್ ಮಾಲೀಕ ಮನೋಹರ ಮೋರೆ ಆಹಾರವನ್ನು ಪೂರೈಸುತ್ತಿದ್ದಾರೆ. ಕ್ಯಾಂಟೀನ್ ಆರಂಭಗೊಂಡು ವರ್ಷ ಕಳಿಯುತ್ತಾ ಬಂದರೂ ಈವರೆಗೂ ಗುತ್ತಿಗೆದಾರರಿಗೆ ಹಣವನ್ನು ನೀಡಿಲ್ಲವಂತೆ. ಸರ್ಕಾರದಿಂದ ಗುತ್ತಿಗೆದಾರರಿಗೆ ಒಟ್ಟು 2.64 ಕೋಟಿ ರೂಪಾಯಿ ಬಾಕಿ ಬರಬೇಕಿದೆ. ಅದಕ್ಕಾಗಿ ಕ್ಯಾಂಟೀನ್ ಬಂದ್ ಮಾಡಲು ಗುತ್ತಿಗೆದಾರರು ಯೋಚಿಸುತ್ತಿದ್ದಾರೆ.
ಒಟ್ಟು 9 ಕ್ಯಾಂಟೀನ್‌ಗಳು ಅವಳಿನಗರದಲ್ಲಿ ಕಾರ್ಯಾರಂಭಗೊಂಡಿದ್ದು, ಉತ್ತಮವಾದ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು, ಮಹಾನಗರ ಪಾಲಿಕೆಯಿಂದ ಹಣ ಬಿಡುಗಡೆಯಾಗಬೇಕಿದೆ. ಗುತ್ತಿಗೆದಾರರು ಪತ್ರ ಬರೆದಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಈ ವಿಷಯವನ್ನು ಸರ್ಕಾರದ ಗಮನಕ್ಕೂ ತರಲಾಗುವುದು ಎಂದು ತಿಳಿಸಿದ್ದಾರೆ.