ಹುಬ್ಬಳ್ಳಿ: ಅಣ್ಣಿಗೇರಿ ಎಪಿಎಂಸಿಯಲ್ಲಿ ಸ್ಥಗಿತಗೊಂಡಿದ್ದ ಹತ್ತಿ ಖರೀದಿ ಕೇಂದ್ರವನ್ನು ಮತ್ತೆ ಆರಂಭಿಸಲಾಗಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಭಾರತ ಹತ್ತಿ ನಿಗಮದ ಅಧಿಕಾರಿಗಳು ಹಾಗೂ ಎಪಿಎಂಸಿ ಅಧ್ಯಕ್ಷ ಗುರುನಾಥ್ ತಿಳಿಸಿದ್ದಾರೆ.
ಅಣ್ಣಿಗೇರಿ ಎಪಿಎಂಸಿಯಲ್ಲಿ ರೈತ ಮುಖಂಡರ ಸಭೆ ನಡೆಸಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಶಾಸಕ ಶಂಕರ್ ಪಾಟೀಲ್ ಅವರ ಪ್ರಯತ್ನದಿಂದ ಈ ಭಾಗದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿ ಮಾರ್ಕೆಟ್ಅನ್ನು ರೈತರ ಅನುಕೂಲಕ್ಕಾಗಿ ಪ್ರಾರಂಭಿಸಲಾಗಿತ್ತು. ಆದರೆ ರೈತರ ಹತ್ತಿ ಕಮ್ಮಿಯಾದ ಹಿನ್ನೆಲೆ ಭಾರತ ಹತ್ತಿ ನಿಗಮದ ಕೇಂದ್ರವನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತೆ ಈಗ ಪುನರಾರಂಭಗೊಂಡಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಲಾಗಿದೆ.
ಇದಕ್ಕೂ ಮುನ್ನ ಉಪವಿಭಾಗಾಧಿಕಾರಿ ಮಹಮದ್ ಜುಬೇರ್ ಅವರು ಅಣ್ಣಿಗೇರಿಯಲ್ಲಿ ಭಾರತೀಯ ಹತ್ತಿ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯಲ್ಲಿ ನಿಯಮಾನುಸಾರ ಹತ್ತಿ ಖರೀದಿಯನ್ನು ತ್ವರಿತವಾಗಿ ಪ್ರಾರಂಭಿಸುವುದು ಹಾಗೂ ಹತ್ತಿ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಮಿಲ್ಗಳ ಕಾರ್ಯಾರಂಭಕ್ಕೆ ಅನುಮತಿ ನೀಡುವ ಕುರಿತು ಚರ್ಚಿಸಿದರು.