ಧಾರವಾಡ: ಪಿಎಫ್ಐ ಮತ್ತು ಆರ್ಎಸ್ಎಸ್ ಒಂದೇ ನಾಣ್ಯದ ಎರಡು ಮುಖ ಎನ್ನುವ ಬಿ ಕೆ ಹರಿಪ್ರಸಾದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ನೆಹರು ಕಾಲದಿಂದಲೂ ಕಾಂಗ್ರೆಸ್‌ಗೆ ತುಷ್ಟೀಕರಣದ ರಾಜಕಾರಣ ರೂಢಿಯಾಗಿಬಿಟ್ಟಿದೆ. ಇಂದಿರಾ ಗಾಂಧಿ ಕಾಲದಲ್ಲಿ ಪರಾಕಾಷ್ಟೆಗೆ ತಲುಪಿ ಸೋನಿಯಾ ಗಾಂಧಿ ಕಾಲದಲ್ಲಿ ತುಷ್ಟೀಕರಣ ಆಕಾಶ ದಾಟಿ ಮೇಲೆ ಹೋಗಿದೆ ಎಂದು ಹರಿಹಾಯ್ದರು.
ಈ ಕುರಿತು ಮಾತನಾಡಿದ ಅವರು, ಈಗ ರಾಹುಲ್ ಮತ್ತು ಸೋನಿಯಾ ಕಾಲದಲ್ಲಿ ತುಷ್ಟಿಕರಣ ಜಗತ್ತಿನ ಯಾವ ದೇಶದಲ್ಲಿ ಇರದಷ್ಟು ಮಿತಿಮೀರಿದೆ. ಪಿಎಫ್ಐ ಬ್ಯಾನ್ ಮಾಡಿರುವುದು ಅವರಿಗೆ ವಿರೋಧ ಮಾಡಲು ಸಾಧ್ಯವಾಗುತ್ತಿಲ್ಲ ವಿರೋಧ ಮಾಡಿದರೆ ಜನ ಸರಿಯಾದ ಪಾಠ ಕಲಿಸುತ್ತಾರೆ. ಅದಕ್ಕಾಗಿ RSS ಹೆಸರು ತೆಗೆಯುವ ಕೆಲಸ ಮಾಡುತ್ತಿದ್ದಾರೆ.
ಹರಿಪ್ರಸಾದ ಅವರಿಗೆ ಒಂದು ಮಾತು ಹೇಳ್ತೀನಿ ನಿಮ್ಮ ಪಕ್ಕದಲ್ಲಿ ಇರುವ ರಾಹುಲ್ ಗಾಂಧಿ ಅವರ ಅಮ್ಮನ ಸರ್ಕಾರದಲ್ಲಿ ಅಂದ್ರೆ ಮನಮೋಹನ್ ಸಿಂಗ್ ಸರ್ಕಾರದಲ್ಲಿ, ನಿಮ್ಮ ತಂದೆ ಸರ್ಕಾರದಲ್ಲಿ ಇಂದಿರಾಗಾಂಧಿ ಮತ್ತು ನೆಹರು ಸರ್ಕಾರದಲ್ಲಿ RSS ನ್ನು ಏನಾದರೂ ಮಾಡಿ ತುಳಿಯಬೇಕು ಎಂದು ಕೆಲಸ ಮಾಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವತ್ತು ವಿಫಲರಾಗಿ ಆರ್ಎಸ್ಎಸ್ ಶತಮಾನಕ್ಕೆ ತಲುಪುತ್ತಿದೆ. ನಾವೆಲ್ಲ RSS ನವರು ದೇಶದ ಪ್ರಮುಖ ಹುದ್ದೆಯಲ್ಲಿರುವವರು RSS ನವರು ತುಷ್ಟೀಕರಣ ಮಾಡಿದ್ದರಿಂದ ವಿರೋಧ ಪಕ್ಷದಲ್ಲಿ ಕೂರಲು ಸ್ಥಿತಿಯಲ್ಲಿಲ್ಲ, ಯುಪಿಯಲ್ಲಿ ನಿಮಗೆ ಜೀರೋ ಸೀಟ್ ಬಂದಿವೆ. ಉತ್ತರಾಖಂಡದಲ್ಲಿ ನಿಮ್ಮ ಪಾರ್ಟಿ ಎಲ್ಲಿದೆ ಎಂದು ಹುಡುಕುವ ಸ್ಥಿತಿಗೆ ಬಂದಿದೆ.
ಈಶಾನ್ಯದಲ್ಲಿ ನಿಮ್ಮ ಒಬ್ಬರೂ ಸಂಸದರು ಇಲ್ಲ. ಈ ಸ್ಥಿತಿಗೆ ತಲುಪಿದ ಮೇಲೂ ನೆಹರು ಕುಟುಂಬ ಪ್ರಯತ್ನ ಮಾಡಿದರೂ ಏನು ಆಗಿಲ್ಲ. ಈಗ 40-50 ಜನ, ರಾಜ್ಯಸಭೆಯಲ್ಲಿ 30ಕ್ಕೆ ಇಳಿದ್ಧಿದ್ದೀರಿ. ದೇಶದ ಎರಡು ರಾಜ್ಯದಲ್ಲಿ ಬಿಟ್ಟರೆ ಎಲ್ಲೂ ಇಲ್ಲ. ಈ ಬಾರಿ ಆ ಎರಡು ರಾಜ್ಯವನ್ನು ಕೂಡ ಕಳೆದುಕೊಳ್ಳುತ್ತೀರಿ. ರಾಹುಲ್ ಗಾಂಧಿ ಯಾತ್ರೆ ಫಲಶೃತಿಯಿಂದ ರಾಜಸ್ಥಾನ ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ. ಸ್ವಲ್ಪ ಸದ್ಭುದ್ದಿ ಸಹ ವಿವೇಚನೆ ಉಪಯೋಗ ಮಾಡಿಕೊಂಡರೆ ದೇವರು ಒಳ್ಳೆಯದು ಮಾಡುತ್ತಾನೆ. ಕಾಂಗ್ರೆಸ್ ಪಕ್ಷ ಸಂಪೂರ್ಣ ಸಾಯಬಾರದು ಎನ್ನುವ ಅಪೇಕ್ಷೆ ನಮಗೂ ಇದೆ ಎಂದು ವ್ಯಂಗ್ಯವಾಡಿದರು.
ಪ್ರಿಯಾಂಕ ಖರ್ಗೆ, ರಾಹುಲ್ ಗಾಂಧಿ ಯಾತ್ರೆಯಿಂದ ಬಿಜೆಪಿಗೆ ನಡುಕ ಹುಟ್ಟಿರುವ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಖರ್ಗೆ ಹಾಗೂ ಕಾಂಗ್ರೆಸ್ ಮುಖಂಡರಿಗೆ ಕೈಮುಗಿದು ಕೇಳುತ್ತೇನೆ ಎಲ್ಲೆಲ್ಲಿ ಚುನಾವಣೆ ಬರ್ತಾವೆ ಅಲ್ಲಿಗೆಲ್ಲ ರಾಹುಲ್ ಗಾಂಧಿ ಅವರನ್ನು ಕಳುಹಿಸಿಕೊಡಿ. ಯಾಕೆಂದರೆ ಅವರು ಎಲ್ಲೆಲ್ಲಿ ಬರುತ್ತಾರೋ ಅಲ್ಲಿ ಕಾಂಗ್ರೆಸ್ ಸೋಲುತ್ತೆ. ರಾಹುಲ್ ಗಾಂಧಿ ಎಷ್ಟು ಓಡಾಡುತ್ತಾರೋ ಅಷ್ಟು ಬಿಜೆಪಿಗೆ ಲಾಭ ಎಂದರು.
ಖರ್ಗೆ ಎಐಸಿಸಿ ಅಧ್ಯಕ್ಷರಾದರೆ ಕಾಂಗ್ರೆಸ್ನಲ್ಲಿ ಬದಲಾವಣೆ ಆಗಬಹುದೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮನಮೋಹನ ಸಿಂಗ್ ಪ್ರಧಾನಿ ಆದಾಗ ಏನಾದ್ರು ಬದಲಾವಣೆ ಆಯ್ತಾ? ರಿಮೋಟ್ ಕಂಟ್ರೋಲ್ ಅಧ್ಯಕ್ಷರು, ರಿಮೋಟ್ ಕಂಟ್ರೋಲ್ ಪ್ರಧಾನಿ ಅವರು ಏನು ಮಾಡಬೇಕಾದರು ಮನೆಯಿಂದ ಒಂದು ಹೆಜ್ಜೆ ಹೊರಗಿಡಬೇಕಂದರೂ ಗಾಂಧಿ ಕುಟುಂಬವನ್ನು ಕೇಳಿ ಮಾಡಬೇಕು. ಅದನ್ನು ಶಶಿ ತರೂರ್ ಅವರೇ ಹೇಳಿದ್ದಾರೆ. ಶಶಿತರೂರ್ ಖರ್ಗೆ ಅವರಿಗೆ ರಾಹುಲ್ ಮತ್ತು ಸೋನಿಯಾ ಪ್ರಾಯೋಜಿತ ಅಭ್ಯರ್ಥಿ ಎಂದು ಹೇಳಿದ್ದಾರೆ. ಇವರೆಲ್ಲಾ ನಾಟಕ ಮಾಡುತ್ತಾರೆ, ಮಾಡಲಿ ಎಂದರು.
ಇದನ್ನೂ ಓದಿ: ಡಿಕೆಶಿ, ಸಿದ್ದರಾಮಯ್ಯ ಎಂದರೆ 36 ಇದ್ದ ಹಾಗೆ, ಎರಡೂ ಮುಖ ಎಂದಿಗೂ ಕೂಡುವುದಿಲ್ಲ: ಸಚಿವ ಕಾರಜೋಳ