ಧಾರವಾಡ : ಬಿಜೆಪಿ ಶಾಸಕ ಯತ್ನಾಳ್ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಭದ್ರಾ ಯೋಜನೆ ಕಿಕ್ ಬ್ಯಾಕ್ ಬಗ್ಗೆ ಹೆಚ್ ವಿಶ್ವನಾಥ್ ಅವರೂ ಹೇಳಿದ್ದಾರೆ. ನಿತ್ಯ 100 ಕೋಟಿ ರೂ. ಅವ್ಯವಹಾರ ಆಗುತ್ತಿದೆ ಅಂತಾ ಯತ್ನಾಳ್ ಹೇಳುತ್ತಿದ್ದಾರೆ. ಭ್ರಷ್ಟಾಚಾರದ ಗಂಗೋತ್ರಿ ಅಂದ್ರೆ ಅದು ಬಿಜೆಪಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಆರೋಪಿಸಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಛಂಬಲ್ ಕಣಿವೆಯವರು ಹೊಟ್ಟೆಗೆ ಏನೂ ಇಲ್ಲದೇ ಡಕಾಯಿತಿ ಮಾಡುತ್ತಾರೆ. ಇವರು ನಮ್ಮ ರಾಜ್ಯದಲ್ಲಿ ಅದನ್ನು ನಾಚುವಂತೆ ಡಕಾಯಿತಿ ಮಾಡುತ್ತಿದ್ದಾರೆ ಎಂದರು. ಮಂತ್ರಿ ಪಿಎ ವಿರುದ್ಧ ಅವರ ಉಪಾಧ್ಯಕ್ಷರೇ ದೂರು ಕೊಟ್ಟಿದ್ದಾರೆ. ಇದು ನೇರವಾಗಿ ಆ ಮಂತ್ರಿ ಮೇಲೆಯೇ ದೂರು ಕೊಟ್ಟಂತೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂತಹ ಭ್ರಷ್ಟಾಚಾರ ಸರ್ಕಾರ ಇದೇ ಮೊದಲು ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ಗೆ ವಾಪಸ್ ಬರುವವರನ್ನು ಕರೆದುಕೊಳ್ಳುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವೇನು ಅಂಗಡಿ ತೆರೆದು ಕುಳಿತಿಲ್ಲ. ನಮ್ಮ ಪಕ್ಷದ ಸಿದ್ಧಾಂತ ನಂಬಿ ಬರ್ತೀನಿ ಅನ್ನೋರು ನೇರವಾಗಿ ಬರೋ ಹಾಗಿಲ್ಲ. ಅರ್ಜಿ ಹಾಕಿದ ಬಳಿಕ ರಾಜ್ಯಮಟ್ಟದ ನಾಯಕರ ವಿಚಾರ ಕೇಳಿ ದೆಹಲಿ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.
ಅವರಿಗೆ ಇಚ್ಛೆ ಇದ್ದಲ್ಲಿ ಅರ್ಜಿ ಹಾಕಿ ಬನ್ನಿ ಅಂತಾ ನಾವಾಗಿಯೇ ಯಾರಿಗೂ ಹೇಳಿಲ್ಲ. ಬರ್ತೀವಿ ಅಂತಾ ಔಪಚಾರಿಕವಾಗಿ ಕೆಲವರು ಕೇಳಿರುತ್ತಾರೆ. ಆಗ ಅವರಿಗೆ ನಮ್ಮ ಕಮಿಟಿಗೆ ಅರ್ಜಿ ಹಾಕಿ ಅಂತಾ ಹೇಳುತ್ತಾರೆ. ಬಿಜೆಪಿಯಲ್ಲಿನ ವಾತಾವರಣ ಏನಾಗಿದೆ ನೀವೇ ನೋಡುತ್ತಿದ್ದೀರಿ, ಈ ಪ್ರಮಾಣದ ಭಿನ್ನಾಭಿಪ್ರಾಯ ಯಾವಾಗಲೂ ಆಗಿಲ್ಲ ಎಂದರು.
ಇದನ್ನೂ ಓದಿ: ಮಹರಾಜರು ಕಟ್ಟಿದ ಡ್ಯಾಂ ಇದು, ಸುಮ್ಮನೆ ಅಪಕೀರ್ತಿ ಏಕೆ?: ಸುಮಲತಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ರವೀಂದ್ರ ಶ್ರೀಕಂಠಯ್ಯ