ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವ ಆಚರಣೆಗೆ 2 ಲಕ್ಷ ನೀಡಬೇಕು. ಇಲ್ಲದಿದ್ದರೆ ಅಂಗಡಿ ನಡೆಸದಂತೆ ಮಾಡುತ್ತೇನೆ ಎಂದು ಬೆದರಿಸಿದ ಆರೋಪದ ಮೇಲೆ ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಮಂಜುನಾಥ ಲೂತಿಮಠ ಸೇರಿದಂತೆ ಎಂಟು ಮಂದಿ ವಿರುದ್ದ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಂಟಿಕೇರಿಯ ಅಳಗುಂಡಗಿ ಓಣಿಯ ಉದ್ಯಮಿ ವಿಜಯ ಅಳಗುಂಡಗಿ ಎಂಬುವವರು ಮಂಜುನಾಥ ಲೂತಿಮಠ, ರಾಹುಲ್, ಅಮಿತ್, ಪ್ರವೀಣ, ಬಸವರಾಜ, ಬಾಲು, ಪ್ರಕಾಶ ಮತ್ತು ವಿಜಯ ವಿರುದ್ದ ದೂರು ನೀಡಿದ್ದಾರೆ. ಮಂಜುನಾಥ ಲೂತಿಮಠ ಅವರು, ಎರಡು-ಮೂರು ವರ್ಷಗಳಿಂದ ಸಹಚರರ ಜೊತೆ ಬಂದು ಬಟರ್ ಮಾರ್ಕೆಟ್, ಜವಳಿ ಸಾಲ, ಉಳ್ಳಾಗಡ್ಡಿ ಓಣಿ ವ್ಯಾಪಾರಸ್ಥರಿಗೆ ಹೆದರಿಸಿ 2 ಲಕ್ಷದಿಂದ 3 ಲಕ್ಷ ಹಣ ವಸೂಲಿ ಮಾಡಿದ್ದಾರೆ. ಅಕ್ಟೋಬರ್ 26ರಂದು ಉಳ್ಳಾಗಡ್ಡಿಮಠ ಬಳಿಯ ನಿಖಿತಾ ಪ್ಲಾಸ್ಟಿಕ್ ಅಂಗಡಿ ಬಳಿ, ವಿಜಯ ಅವರನ್ನು ಕರೆಸಿಕೊಂಡು ರಾಜ್ಯೋತ್ಸವಕ್ಕೆ 2 ಲಕ್ಷ ಕೊಡಬೇಕು. ಪ್ರತಿ ಮೂರು ತಿಂಗಳಿಗೆ ನೀಡಬೇಕಾದ 1.70 ಲಕ್ಷ ಕಡ್ಡಾಯವಾಗಿ ನೀಡಬೇಕು. ಇಲ್ಲದಿದ್ದರೆ ಅಂಗಡಿ ನಡೆಸದಂತೆ ಮಾಡುತ್ತೇನೆ ಎಂದು ಧಮಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ವಿಜಯ ಅವರು ಇವರಿಂದ ವ್ಯಾಪಾರಸ್ಥರು ನಿತ್ಯ ಕಿರಿಕುಳ ಅನುಭವಿಸಬೇಕಾಗಿದೆ. ಇವರ ಕಿರುಕುಳ ತಾಳಲಾರದಂತಾಗಿದೆ. ನನದೊಂದು ಜವಳಿ ಸಾಲಿನಲ್ಲಿ ಸಣ್ಣ ಪ್ಯಾಕೇಜಿಂಗ್ ಅಂಗಡಿ ಇದೆ. ನಾನು ಒಂದು ವೇಳೆ ನಿಷೇಧಿತ ಪ್ಲಾಸ್ಟಿಕ್ ವ್ಯಾಪಾರದಲ್ಲಿ ಕಾನೂನು ಉಲ್ಲಂಘನೆ ಮಾಡಿದರೆ ಸರ್ಕಾರವಿದೆ. ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇದ್ದಾರೆ. ಅವರು ನನ್ನ ಮೇಲೆ ಕಾನೂನು ಕ್ರಮ ತಗೆದುಕೊಳ್ಳಲಿ. ಅದನ್ನು ಬಿಟ್ಟು ಇವರೇನು ಮಧ್ಯವರ್ತಿಗಳಾ. ಇವರಿಗೆ ಯಾಕೆ ದುಡ್ಡುಕೊಡಬೇಕು. ಇಷ್ಟು ದಿನ ವ್ಯಾಪಾರಸ್ಥರ ಸಹಕಾರ ಸಿಗದ ಕಾರಣ ನಾನು ಮೂರು ವರ್ಷಗಳಿಂದ ಸಹಿಸಿಕೊಂಡು ಬಂದು ದೂರು ನೀಡಿದ್ದೇನೆ ಎಂದರು.
ಆರೋಪ ನಿರಾಕರಿಸಿದ ಮಂಜುನಾಥ ಲೂತಿ: ಇವರ ಆರೋಪಕ್ಕೆ ಹಾಗೂ ದೂರಿನ ಬಗ್ಗೆ ಕರವೇ ಪ್ರವೀಣ ಶೆಟ್ಟಿ ಬಣ್ದ ಜಿಲ್ಲಾಧ್ಯಕ್ಷ ಮಂಜುನಾಥ ಲೂತಿಮಠ ಪ್ರತಿಕ್ರಿಯೆ ನೀಡಿದ್ದು, ಈ ಆರೋಪ ಸತ್ಯಕ್ಕೆ ದೂರವಾದದ್ದು, ನಮ್ಮ ಸಂಘಟನೆ ನಿಷೇಧಿತ ಪ್ಲಾಸ್ಟಿಕ್ ಅಭಿಯಾನ ನಡೆಸಿದೆ. ಇದಕ್ಕೆ ನಗರದ ಪ್ಲಾಸ್ಟಿಕ್ ವ್ಯಾಪಾರಸ್ಥರು ಹತಾಶರಾಗಿದ್ದಾರೆ. ನಮ್ಮ ಸಂಘಟನೆ ವತಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಿಷೇಧಿತ ಪ್ಲಾಸ್ಟಿಕ್ ಸೀಜ್ ಮಾಡಿಸಿದ್ದೇವೆ. ಇದನ್ನು ಸಹಿಸಿಕೊಳ್ಳಲಾಗದೇ ಇಂತ ಆರೋಪ ಮಾಡುತ್ತಿದ್ದಾರೆ. ದೂರುದಾರ ವಿಜಯ ಅಳಗುಂಡಗಿ ನಿಜವಾದ ವ್ಯಾಪಾರಸ್ಥನೇ ಹೌದೋ ಅಲ್ಲವೋ ಎನ್ನುವ ಬಗ್ಗೆ ಅನುಮಾನವಿದೆ. ಹೀಗಾಗಿ ವಿಜಯ ಹಾಗೂ ಶಿವಾನಂದ ಮುತ್ತಣ್ಣನವರ ಮೇಲೆ ನಾವು ದೂರು ದಾಖಲಿಸುತ್ತೇವೆ ಎಂದರು.
ಇಂತ ಎಫ್ಐಆರ್ಗಳಿಗೆ ನಾವು ಹೆದರುವುದಿಲ್ಲ. ನಾನು ವೈಯಕ್ತಿಕವಾಗಿ ದುಡ್ಡು ಕೇಳಿಲ್ಲ, ಕೇಳುವುದಿಲ್ಲ. ನಮ್ಮ ಹೋರಾಟ ಮುಂದುವರೆಯುತ್ತದೆ. ವಿಜಯ ಅಳಗುಂಡಗಿ ನನ್ನ ನಡುವೇ ದುಡ್ಡಿನ ವ್ಯವಹಾರ ಮೊದಲಿನಿಂದಲೂ ಇದೆ. ಆದರೆ, ಈ ಆ ವಿಚಾರ ಯಾಕೆ ಎತ್ತಿದ್ದಾನೋ ಗೊತ್ತಿಲ್ಲ. ನಾನು ಪ್ಲಾಸ್ಟಿಕ್ ವಿಚಾರದಲ್ಲಿ ದುಡ್ಡು ಕೇಳಿಲ್ಲ. ಸಂಘಟನೆಯ ವಿಚಾರದಲ್ಲಿ ಐದು ಹತ್ತು ಲಕ್ಷ ಕೊಟ್ಟರೆ ತಗೆದುಕೊಳ್ಳುತ್ತೇವೆ. ಆದರೆ, ಧಮಕಿ ಹಾಕಿ ಹಣ ವಸೂಲಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬೆಂಗಳೂರು: ಮಾರಕಾಸ್ತ್ರ ತೋರಿಸಿ ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ