ಹುಬ್ಬಳ್ಳಿ: ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆ ಮಾಡಿಕೊಡದಿದ್ದಲ್ಲಿ ಯುವತಿ ಜತೆಗಿನ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪಾಂಡಿಚೇರಿ ಮೂಲದ ಬಿಜೆಪಿ ಯುವ ಮುಖಂಡನನ್ನು ಸೈಬರ್ ಕ್ರೈಂ ಪೊಲೀಸರು ಬಂದಿಸಿದ್ದಾರೆ.
ರಾಕಿ ಎಂಬುವವನೇ ಬಂಧಿತ ಆರೋಪಿ. ರಾಕಿ, ಪಾಂಡಿಚೇರಿಯಲ್ಲಿ ಯುವ ಬಿಜೆಪಿ ಮುಖಂಡನಾಗಿ ಗುರುತಿಸಿಕೊಂಡಿದ್ದಾನೆ. ಈತ ಮದುವೆ ಮಾಡುವಂತೆ ಯುವತಿಯ ಕುಟುಂಬವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಈ ಬಗ್ಗೆ ಯುವತಿಯ ತಂದೆ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಯುವತಿಯ ತಂದೆ ಸಹ ಪಾಂಡಿಚೇರಿ ಮೂಲದವರಾಗಿದ್ದು, ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದಿದ್ದು, ನಗರದ ಮಂಟೂರು ರಸ್ತೆಯಲ್ಲಿ ವಾಸವಾಗಿದ್ದಾರೆ. ಯುವತಿಯ ತಾಯಿ ಕಡೆಯಿಂದ ದೂರದ ಸಂಬಂಧವೆಂಬ ಕಾರಣಕ್ಕೆ ರಾಕಿ ಯುವತಿ ಜತೆ ಹೆಚ್ಚು ಒಡನಾಟ ಹೊಂದಿದ್ದ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಜೊತೆಯಾಗಿದ್ದಾಗ ರಾಕಿ, ತನ್ನ ಮೊಬೈಲ್ನಲ್ಲಿ ಫೋಟೋ ಹಾಗೂ ವಿಡಿಯೋ ತೆಗೆದುಕೊಂಡಿದ್ದಾನೆ. ಯುವತಿಯನ್ನು ಮದುವೆ ಮಾಡಿಕೊಡುವಂತೆ ಅನೇಕ ಬಾರಿ ಒತ್ತಾಯಿಸಿದ್ದಾನೆ. ಆದರೆ, ರಾಕಿ ಮತ್ತು ಯುವತಿಯದ್ದು ಅಣ್ಣ-ತಂಗಿ ಸಂಬಂಧವಾಗಿತ್ತು. ಹೀಗಾಗಿ, ಯುವತಿ ಕುಟುಂಬಸ್ಥರು ಮದುವೆಯನ್ನು ನಿರಾಕರಿಸಿದ್ದರು.
ರಾಕಿ ಮದುವೆಯಂತಾದರೆ ಅದು ಆಕೆಯನ್ನೇ ಎಂದು ಪಟ್ಟು ಹಿಡಿದು ಯುವತಿಯ ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಅಲ್ಲದೇ, ವಿಡಿಯೋ ಮತ್ತು ಚಿತ್ರಗಳನ್ನು ಯುವತಿಯ ತಂದೆ ಮೊಬೈಲ್‌ಗೆ ಈಗಾಗಲೇ ಕಳುಹಿಸಿದ್ದಾನೆ. ಇತರೆ ಕೆಲ ವಾಟ್ಸ್ಆ್ಯಪ್ ಗ್ರುಪ್‌ನಲ್ಲಿಯೂ ಹಾಕಿದ್ದಾನೆ ಎಂದು ದೂರಲಾಗಿದೆ.
ಅಷ್ಟಕ್ಕೆ ಸುಮ್ಮನಾಗದೇ ಆತ ಅವರಿಬ್ಬರ ಕೆಲ ಅಶ್ಲೀಲ ಫೋಟೋಗಳನ್ನು ಫೇಸ್‌ಬುಕ್ ಖಾತೆಗೂ ಹಾಕಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದರಿಂದ ತೀವ್ರವಾಗಿ ನೊಂದ ಯುವತಿಯ ಕುಟುಂಬಸ್ಥರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.